ಅಧ್ಯಾಯ 1



ದಿವ್ಯವಾಣಿ
                                                                                                                                               
1ಜಗತ್ತು ಉಂಟಾಗುವ ಮೊದಲೇ 'ದಿವ್ಯವಾಣಿ'* ಎಂಬುವವರಿದ್ದರು.
ಆ ದಿವ್ಯವಾಣಿ ದೇವರಾಗಿದ್ದರು.
ಆ ದಿವ್ಯವಾಣಿ ದೇವರೊಂದಿಗೆ ಇದ್ದರು.
2ಅನಾದಿಯಿಂದಲೇ ಅವರು ದೇವರೊಂದಿಗೆ ಇದ್ದರು.
3ದಿವ್ಯವಾಣಿಯ ಮುಖಾಂತರವೇ ಸಮಸ್ತವೂ ಉಂಟಾಯಿತು.
ಉಂಟಾದವುಗಳಲ್ಲಿ ಯಾವುದೂ ಆದಿವ್ಯವಾಣಿಯಿಂದಲ್ಲದೆ ಆದುದಲ್ಲ.
4ಆ ದಿವ್ಯವಾಣಿಯಲ್ಲಿ ಸಜ್ಜೀವವಿತ್ತು.
ಆ ಜೀವವೇ ಮಾನವಜನಾಂಗದ ಜ್ಯೋತಿಯಾಗಿತ್ತು.
5ಆ ಜ್ಯೋತಿ ಕತ್ತಲಲ್ಲಿ ಪ್ರಕಾಶಿಸುತ್ತದೆ.
ಕತ್ತಲಿಗೆ ಅದನ್ನು ನಿಗ್ರಹಿಸಲಾಗಲಿಲ್ಲ.
                                                                                               
6ದೇವರು ಒಬ್ಬ ವ್ಯಕ್ತಿಯನ್ನು ಕಳುಹಿಸಿದರು.
ಆತನ ಹೆಸರು ಯೊವಾನ್ನ.
7ಈತನು ಸಾಕ್ಷಿಕೊಡಲು ಬಂದನು.
ತನ್ನ ಮುಖಾಂತರ ಸರ್ವರೂ ವಿಶ್ವಾಸಿಸುವಂತೆ
ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಿದರು.
8ಈತನೇ ಜ್ಯೋತಿಯಾಗಿರಲಿಲ್ಲ;
ಆ ಜ್ಯೋತಿಯನ್ನು ಕುರಿತು ಸಾಕ್ಷಿ ನೀಡಲೆಂದೇ ಬಂದವನು.
9ನಿಜವಾದ ಆ ಜ್ಯೋತಿ ಆ ದಿವ್ಯವಾಣಿಯೇ.
ಮಾನವರೆಲ್ಲರನ್ನು ಬೆಳಗಿಸಲು ಲೋಕಕ್ಕೆ ಆಗಮಿಸಲಿದ್ದ ಜಗಜ್ಯೋತಿ ಅವರೇ.

10ದಿವ್ಯವಾಣಿ ಲೋಕದಲ್ಲಿ ಇದ್ದರು.
ಅವರ ಮುಖಾಂತರವೇ ಲೋಕವು ಉಂಟಾಯಿತು.
ಆದರೆ ಆ ಲೋಕವು ಅವರನ್ನು ಅರಿತುಕೊಳ್ಳದೆ ಹೋಯಿತು.
11ಅವರು ತಮ್ಮ ಸ್ವದೇಶಕ್ಕೆ ಬಂದರು;
ಸ್ವಜನರೇ ಅವರನ್ನು ಬರಮಾಡಿಕೊಳ್ಳದೆ ಹೋಯಿತು.
12ಕೆಲವರು ಅವರನ್ನು ಬರಮಾಡಿಕೊಂಡರು.
ಅಂಥವರಿಗೆ, ಅಂದರೆ ಅವರಲ್ಲಿ ವಿಶ್ವಾಸವಿಟ್ಟವರಿಗೆ
ದೇವರ ಮಕ್ಕಳಾಗುವ ಹಕ್ಕನ್ನು ಕೊಟ್ಟರು.
13ಅಂಥವರ ಜನನವು ರಕ್ತಸಂಬಂಧದಿಂದ ಅಲ್ಲ,
ಶಾರೀರಿಕ ಇಚ್ಚೆಯಿಂದಲ್ಲ,
ಮಾನವ ಸಹಜ ಬಯಕೆಯಿಂದಲೂ ಅಲ್ಲ;
ದೇವರಿಂದಲೇ ಆದುದು.
                                                                                                                       
14ಆ ದಿವ್ಯವಾಣಿ ಮನುಷ್ಯರಾದರು.
ಮನುಷ್ಯರಾಗಿ ನಮ್ಮೊಡನೆ ವಾಸಮಾಡಿದರು.
ಅವರ ಮಹಿಮೆಯನ್ನು ನಾವು ನೋಡಿದೆವು.
ಪಿತನಿಂದ ಪಡೆದ ಆ ಮಹಿಮೆ
ಏಕೈಕ ಪುತ್ರನಿಗೆ ಮೀಸಲಾದ ಮಹಿಮೆಯೇ.
ಎಂದೇ ಅವರು ವರಪ್ರಸಾದದಿಂದಲೂ ಸತ್ಯದಿಂದಲೂ ಪರಿಪೂರ್ಣರಾಗಿದ್ದರು.

15ಯೊವಾನ್ನನು ಅವರನ್ನು ಕುರಿತು ಸಾಕ್ಷಿ ನುಡಿಯುತ್ತಾ,
'ಅವರು ನನ್ನ ಬಳಿಗೆ ಬಂದವರಾದರೂ
ನನಗಿಂತ ಮೊದಲೇ ಇದ್ದವರು
ಆದುದರಿಂದ ಅವರು ನನಗಿಂತಲೂ ಶ್ರೇಷ್ಟರು
ಎಂದು ನಾನು ಹೇಳಿದ್ದು ಅವರನ್ನು ಕುರಿತೇ,' ಎಂದು ಘೋಷಿಸಿದನು.
                                                                       
16ಅವರ ಪರಿಪೂರ್ಣತೆಯಿಂದ ನಾವೆಲ್ಲರು
ವರಪ್ರಸಾದದ ಮೇಲೆ ವರಪ್ರಸಾದವನ್ನು ಪಡೆದಿದ್ದೇವೆ.
17ಧರ್ಮಶಾಸ್ತ್ರವನ್ನು ಮೋಶೆಯ ಮುಖಾಂತರ ಕೊಡಲಾಯಿತು.
ವರಪ್ರಸಾದ ಹಾಗೂ ಸತ್ಯವು ಯೇಸುಕ್ರಿಸ್ತರ ಮುಖಾಂತರ ಬಂದವು.
18ಯಾರೂ ಎಂದೂ ದೇವರನ್ನು ಕಂಡಿಲ್ಲ,
ಪಿತನ ವಕ್ಷಸ್ಥಲದಲ್ಲಿ ಇರುವ ಏಕೈಕ ಪುತ್ರನೇ ಅವರನ್ನು ವ್ಯಕ್ತಪಡಿಸಿದ್ದಾರೆ.


ಸ್ನಾನಿಕ ಯೊವಾನ್ನನ ಸಾಕ್ಷ್ಯ
(ಮತ್ತಾಯ೩:-೧೨; ಮಾರ್ಕ೧:-; ಲೂಕ೩:-೧೮)
                                                                                                                                                                                                                       
19ಜೆರುಸಲೇಮಿನ ಯೆಹೂದ್ಯ ಅಧಿಕಾರಿಗಳು, ಯಾಜಕರನ್ನೂ ಲೇವಿಯರನ್ನೂ ಯೊವಾನ್ನನ ಬಳಿಗೆ ಕಳುಹಿಸಿದರು.
ಅವರು,
"ಯಾರು ನೀನು?"
ಎಂದು ಪ್ರಶ್ನಿಸಿದರು.
20ಅದಕ್ಕೆ ಯೊವಾನ್ನನು ಉತ್ತರವಾಗಿ,
"ಅಭಿಷಿಕ್ತನಾದ ಲೋಕೋದ್ಧಾರಕ** ನಾನಲ್ಲ,"
ಎಂದು ಸ್ಪಷ್ಟವಾಗಿ ಒತ್ತಿ ಹೇಳಿದನು. ಏನನ್ನೂ ಮರೆಮಾಚಲಿಲ್ಲ.
21"ಹಾಗಾದರೆ ನೀನು ಎಲೀಯನೋ?"
ಎಂದು ಕೇಳಲು,
"ಅಲ್ಲ"
ಎಂದನು.
" ನೀನು ಬರಬೇಕಾಗಿದ್ದ ಪ್ರವಾದಿಯಿರಬಹುದೇ?"
ಎಂದವರು ಮತ್ತೆ ಕೇಳಿದಾಗ,
"ಅದೂ ಅಲ್ಲ,"
ಎಂದು ಮರು ನುಡಿದನು.
22"ಹಾಗಾದರೆ ನೀನು ಯಾರೆಂದು ನಮಗೆ ತಿಳಿಸು. ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡಬೇಕಾಗಿದೆ. ನಿನ್ನನ್ನು ಕುರಿತು ನೀನು ಏನು ಹೇಳುವೆ?"
ಎಂದು ಅವರು ಮತ್ತೊಮ್ಮೆ ಕೇಳಿದರು. 23ಅದಕ್ಕೆ ಯೊವಾನ್ನನು.,
"ಪ್ರಭುವಿನ ಮಾರ್ಗವನ್ನು ನೇರಗೊಳಿಸಿರೆಂದು ಬೆಂಗಾಡಿನಲ್ಲಿ ಕೂಗುವವನ ಸ್ವರವೇ ನಾನು,"
ಎಂದು ಯೆಶಾಯ ಪ್ರವಾದಿಯ ಮಾತುಗಳಲ್ಲೇ ಉತ್ತರಕೊಟ್ಟನು.
24-25ಆಗ ಫರಿಸಾಯರ ಕಡೆಯಿಂದ ಬಂದಿದ್ದ ಕೆಲವರು,
"ನೀನು ಲೋಕೋದ್ಧಾರಕನಾಗಲಿ, ಎಲೀಯನಾಗಲಿ, ಬರಬೇಕಾಗಿದ್ದ ಪ್ರವಾದಿಯೇ ಅಲ್ಲವೆಂದ ಮೇಲೆ ಸ್ನಾನದೀಕ್ಷೆ ಕೊಡುವುದೇಕೆ?"
ಎಂದು ಪ್ರಶ್ನಿಸಿದನು. 26ಪ್ರತ್ಯುತ್ತರವಾಗಿ ಯೊವಾನ್ನನು,
"ನಾನು ನಿಮಗೆ ನೀರಿನಿಂದ ಸ್ನಾನದೀಕ್ಷೆಯನ್ನು ಕೊಡುತ್ತಿದ್ದೇನೆ. ನಿಮಗೆ ತಿಳಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. 27ನನ್ನ ಬಳಿಕ ಬರಬೇಕಾಗಿದ್ದವರೂ ಅವರೇ. ಆವರ ಪಾದರಕ್ಷೆಗಳನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ,"
ಎಂದನು.
28ಯೊವಾನ್ನನು ಸ್ನಾನದೀಕ್ಷೆ ಕೊಡುತ್ತಿದ್ದ ಜೋರ್ಡನ್ನದಿಯ ಆಚೆ ದಡದಲ್ಲಿದ್ದ ಬೆಥಾನಿಯ ಎಂಬಲ್ಲಿ ಇದೆಲ್ಲವೂ ನಡೆಯಿತು.


ದೇವರ ಯಜ್ಞಪಶು

29ಮರುದಿನ ಯೊವಾನ್ನನು, ತಾನಿದ್ದಲ್ಲಿಗೇ ಯೇಸು ಬರುತ್ತಿರುವುದನ್ನು ಕಂಡು,
"ಇದೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ; ಲೋಕದ ಪಾಪಗಳನ್ನು ಪರಿಹರಿಸುವವರು ಇವರೇ. 30ಇವರು ನನ್ನ ಬಳಿಕ ಬಂದವರಾದರೂ ನನಗಿಂತಲೂ ಮೊದಲೇ ಇದ್ದವರು; ಆದುದರಿಂದ 'ಇವರು ನನಗಿಂತಲೂ ಶ್ರೇಷ್ಟರು,' ಎಂದು ನಾನು ಹೇಳಿದ್ದು ಇವರನ್ನು ಕುರಿತೇ. 31ಇಸ್ರಯೇಲರಿಗೆ ಇವರನ್ನು ತೋರ್ಪಡಿಸಿಬೇಕೆಂದೇ ನಾನು ನೀರಿನಿಂದ ಸ್ನಾನದೀಕ್ಷೆ ಕೊಡುತ್ತಾ ಬಂದೆನು; 33ಬರಬೇಕಾಗಿದ್ದವರು ಇವರೇ ಎಂದು ನನಗೂ ತಿಳೀದಿರಲಿಲ್ಲ,"
ಎಂದು ನುಡಿದನು.
32ಯೊವಾನ್ನನು ತನ್ನ ಸಾಕ್ಷ್ಯವನ್ನು ಮುಂದುವರಿಸುತ್ತಾ,
"ಪಾರಿವಾಳದ ರೂಪದಲ್ಲಿ ಪವಿತ್ರಾತ್ಮ ಸ್ವರ್ಗದಿಂದ ಇಳಿದು ಬಂದು ಯಾವ ವ್ಯಕ್ತಿಯ ಮೇಲೆ ನೆಲೆಸುವುದನ್ನು ನೀನು ನೋಡುವಿರೋ ಅವರೇ ಪವಿತ್ರಾತ್ಮರಿಂದ ದೀಕ್ಷಾಸ್ನಾನ ಕೊಡುವವರು, ಎಂದಿದ್ದರು. 34ಅದನ್ನು ನಾನು ಕಣ್ಣಾರೆ ನೋಡಿದ್ದೇನೆ. ಆದುದರಿಂದ ಅವರೇ ದೇವರಪುತ್ರರು ಎಂದು ಸಾಕ್ಷಿ ನೀಡುತ್ತಿದ್ದೇನೆ,"
ಎಂದು ಹೇಳಿದನು.

ಪ್ರಥಮ ಶಿಷ್ಯಗಣ

35ಮಾರನೆಯ ದಿನ ಯೊವಾನ್ನನು ತನ್ನ ಶಿಷ್ಯರ ಸಂಗಡ ನಿಂತುಕೊಂಡಿರುವಾಗ, ಯೇಸು ಆ ಮಾರ್ಗವಾಗಿ ಹೋಗುತ್ತಿದ್ದರು. 36ಅವರನ್ನು ನೋಡುತ್ತಲೇ ಯೊವಾನ್ನನು ತನ್ನ ಶಿಷ್ಯರಿಗೆ,
"ಇದೋ ನೋಡಿ, ಬಲಿಯರ್ಪಣೆಗಾಗಿ ದೇವರು ನೇಮಿಸಿರುವ ಕುರಿಮರಿ,"
ಎಂದು ಹೇಳಿದನು.
37ಇದನ್ನು ಕೇಳಿದ ಆ ಶಿಷ್ಯರು ಯೇಸುವನ್ನು ಹಿಂಬಾಲಿಸಿದರು. 38ಯೇಸು ತಮ್ಮನ್ನು ಹಿಂಬಾಲಿಸಿ ಬರುತ್ತಿದ್ದವರನ್ನು ನೋಡಿ,
 "ನಿಮಗೇನು ಬೇಕು?"
ಎಂದು ಕೇಳಿದರು. ಅವರು,
"ರಬ್ಬಿ, ತಾವು ವಾಸ ಮಾಡುವುದೆಲ್ಲಿ?"
ಎಂದು ವಿಚಾರಿಸಿದರು. ('ರಬ್ಬಿ' ಎಂದರೆ ಗುರುದೇವ ಎಂದು ಅರ್ಥ).
39ಯೇಸು ಉತ್ತರವಾಗಿ,
"ಬಂದು ನೋಡಿ,"
ಎನ್ನಲು ಅವರು ಹೋಗಿ ಯೇಸು ಇದ್ದ ಸ್ಥಳವನ್ನು ಕಂಡು ಆ ದಿನವನ್ನು ಅವರೊಡನೆ ಕಳೆದರು. ಆಗ ಸಾಯಂಕಾಲ ಸುಮಾರು ನಾಲ್ಕು ಗಂಟೆಯಾಗಿತ್ತು.
40ಯೊವಾನ್ನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ್ದ ಇಬ್ಬರು ಶಿಷ್ಯರಲ್ಲಿ ಸಿಮೋನ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನು. 41ಇವನು ಮೊದಲು ತನ್ನ ಸಹೋದರ ಸಿಮೋನನನ್ನು ಕಂಡು,
"'ಮೆಸ್ಸೀಯ' ಸಿಕ್ಕಿದ್ದಾರೆ,"
ಎಂದು ತಿಳಿಸಿ 42ಅವನನ್ನು ಯೇಸುವಿನ ಬಳಿಗೆ ಕರೆತಂದನು. (' ಮೆಸ್ಸೀಯ' ಎಂದರೆ ಅಭಿಷಿಕ್ತನಾದ ಲೋಕೋದ್ಧಾರಕ ಎಂದು ಅರ್ಥ). ಯೇಸು ಸಿಮೋನನನ್ನು ಕಂಡು,
ಯೊವಾನ್ನನ ಮಗನಾದ ಸಿಮೋನನೇ, ಇನ್ನು ಮುಂದೆ ನಿನ್ನನ್ನು ಕೇಫನೆಂದು ಕರೆಯುವರು,"
ಎಂದು ನುಡಿದರು.('ಕೇಫ' ಎಂದರೆ 'ಪೇತ್ರ'ಇಲ್ಲವೇ 'ಬಂಡೆ' ಎಂದರ್ಥ)
                                                                                                                                                                                                                                                                       

ಫಿಲಿಪ್ಪ ಮತ್ತು ನಥಾನಿಯೇಲರಿಗೆ ಕರೆ

43ಮರುದಿನ ಯೇಸುವು ಗಲಿಲೇಯ ನಾಡಿಗೆ ಹೋಗಲು ನಿರ್ಧರಿಸಿದರು. ಅವರು ಫಿಲಿಪ್ಪನನ್ನು ಕಂಡು,
"ನನ್ನೊಡನೆ ಬಾ,"
ಎಂದು ಕರೆದರು. 44ಅಂದ್ರೆಯ ಮತ್ತು ಪೇತ್ರನಂತೆ ಫಿಲಿಪ್ಪನು ಕೂಡ ಬೆತ್ಸಾಯಿದ ಎಂಬ ಊರಿನವನು 45ಫಿಲಿಪ್ಪನು ನಥಾನಿಯೇಲನನ್ನು ಕಂಡು,
"ಧರ್ಮಶಾಸ್ತ್ರದಲ್ಲಿ ಮೋಶೆಯು ಉಲ್ಲೇಖಿಸಿದ ಮತ್ತು ಪ್ರವಾದಿಗಳು ಪ್ರವಚನ ಮಾಡಿದ ವ್ಯಕ್ತಿಯು ನಮಗೆ ಸಿಕ್ಕಿದ್ದಾರೆ. ಇವರೇ ನಜ಼ರೆತ್ಊರಿನ ಜೋಸೆಫನ ಮಗನಾದ ಯೇಸು,"
ಎಂದು ಹೇಳಿದನು. 46ಅದಕ್ಕೆ ನಥಾನಿಯೇಲನು,
"ಏನು? ನಜ಼ರೇತಿನಿಂದ ಒಳ್ಳೆಯದೇನಾದರೂ ಬರುವುದುಂಟೆ?"
ಎಂದು ಕೇಳಲು,
"ಬಾ ನೋಡುವಿಯಂತೆ,"
ಎಂದು ಫಿಲಿಪ್ಪನು ಉತ್ತರ ಕೊಟ್ಟನು. 47ತಮ್ಮ ಬಳಿಗೆ ಬರುತ್ತಿದ್ದ ನಥಾನಿಯೇಲನನ್ನು ಕಂಡ ಯೇಸು,
"ಇದೋ ನೋಡಿ ನಿಜವಾದ ಇಸ್ರಯೇಲನು, ಈತನಲ್ಲಿ ಕಪಟವಿಲ್ಲ,"
ಎಂದು ನುಡಿದರು.
48ನಥಾನಿಯೇಲನು,
"ನನ್ನ ಪರಿಚಯ ನಿಮಗೆ ಹೇಗಾಯಿತು?"
ಎಂದು ಕೇಳಲು ಯೇಸು,
"ನಿನ್ನನ್ನು ಕರೆಯುವ ಮೊದಲೇ ನೀನು ಅಂಜೂರದ ಮರದಡಿ ಇದ್ದಾಗ ನಾನು ನಿನ್ನನ್ನು ಕಂಡೆ,"
ಎಂದು ಉತ್ತರ ಕೊಟ್ಟರು.
49ಅದಕ್ಕೆ ನಥಾನಿಯೇಲನು,
"ಗುರುದೇವಾ, ದೇವರಪುತ್ರ ನೀವೇ; ಇಸ್ರಯೇಲರ ಅರಸ ನೀವೇ,"
ಎಂದನು.
50ಆಗ ಯೇಸು,
"ಅಂಜೂರದ ಮರದಡಿಯಲ್ಲಿ ನಿನ್ನನ್ನು ಕಂಡೆನೆಂದು ನಾನು ಹೇಳಿದ ಮಾತ್ರಕ್ಕೆ ಇಷ್ಟೊಂದು ವಿಶ್ವಾಸವೆ? ಇದಕ್ಕೂ ಮಿಗಿಲಾದವುಗಳನ್ನು ನೀನು ಕಾಣುವೆ,"
 ಎಂದು ನುಡಿದರು. ತಮ್ಮ ಮಾತನ್ನು ಮುಂದುವರಿಸುತ್ತಾ,  
"ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಸ್ವರ್ಗವು ತೆರೆದಿರುವುದನ್ನೂ ನರಪುತ್ರನ ಮುಖಾಂತರ ದೇವದೂತರು ಏರುವುದನ್ನೂ ಇಳಿಯುವುದನ್ನೂ ನೀವು ಕಾಣುವಿರಿ,"
ಎಂದು ಹೇಳಿದರು.         




 


* ಕ್ರಿಸ್ತ ಯೇಸು

**ಕ್ರಿಸ್ತ






ಅಧ್ಯಾಯಗಳು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ