ನೈಜ ದ್ರಾಕ್ಷಾಬಳ್ಳಿ
1"ನಾನೇ
ನಿಜವಾದ ದ್ರಾಕ್ಷಾಬಳ್ಳಿ. ನನ್ನ ಪಿತನೇ ತೋಟಗಾರ. 2ನನ್ನಲ್ಲಿದ್ದೂ
ಫಲ ಕೊಡದ ಕವಲು ಬಳ್ಳಿಗಳನ್ನೆಲ್ಲಾ ಅವರು ಕತ್ತರಿಸಿ ಹಾಕುವರು. ಫಲಕೊಡುವ ಕವಲುಬಳ್ಳಿಗಳು ಮತ್ತಷ್ಟು
ಫಲಕೊಡುವಂತೆ ಅವನ್ನು ಸಮರಿ ಶುದ್ಧಗೊಳಿಸುವರು. 3ಆದರೆ ನೀವು, ನಾನು ನಿಮ್ಮೊಡನೆ
ಆಡಿದ ಮಾತಿನಿಂದಾಗಿ ಸಮರಿದ ಕವಲುಗಳಂತೆ ಶುದ್ಧರಾಗಿದ್ದೀರಿ. 4ನೀವು ನನ್ನಲ್ಲಿ ನೆಲೆಗೊಂಡಿರಿ. ಆಗ ನಾನು ನಿಮ್ಮಲ್ಲಿ ನೆಲೆಗೊಳ್ಳುವೆನು.
ಕವಲು ಮೂಲಬಳ್ಳಿಯಲ್ಲಿ ಒಂದಾಗಿ ನೆಲೆಸದಿದ್ದರೆ ತನ್ನಷ್ಟಕ್ಕೆ ತಾನೇ ಫಲಕೊಡಲಾಗದು. ಹಾಗೆಯೇ ನೀವೂ
ಕೂಡ ನನ್ನಲ್ಲಿ ಒಂದಾಗಿ ನೆಲೆಸದಿದ್ದರೆ ಫಲಕೊಡಲಾರಿರಿ." 5"ಹೌದು, ನಾನೇ ದ್ರಾಕ್ಷಾಬಳ್ಳಿ;
ನೀವೇ ಅದರ ಕವಲು ಬಳ್ಳಿಗಳು. ಒಬ್ಬನು ನನ್ನಲ್ಲಿಯೂ ನಾನು ಅವನಲ್ಲಿಯೂ ನೆಲೆಗೊಂಡಿದ್ದರೆ ಅಂಥವನು ಸಮೃದ್ಧಿಯಾಗಿ
ಫಲಕೊಡುವನು. ಏಕೆಂದರೆ, ನನ್ನಿಂದ ಬೇರ್ಪಟ್ಟು ನಿಮ್ಮಿಂದೇನೂ ಮಾಡಲಾಗದು. 6ನನ್ನಲ್ಲಿ ನೆಲೆಸದವನನ್ನು ಕವಲು ಬಳ್ಳಿಯಂತೆ ಕತ್ತರಿಸಿ ಎಸೆಯಲಾಗುವುದು;
ಅವನು ಒಣಗಿ ಹೋಗುವನು. ಒಣಗಿದ ಕವಲುಗಳನ್ನು ಒಟ್ಟುಗೂಡಿಸಿ ಬೆಂಕಿಯಲ್ಲಿ ಸುಟ್ಟುಹಾಕಲಾಗುವುದು."
7"ನೀವು
ನನ್ನಲ್ಲಿಯೂ ನನ್ನ ವಾಕ್ಯವು ನಿಮ್ಮಲ್ಲಿಯೂ ನೆಲೆಗೊಂಡಿದ್ದರೆ ನೀವು ಏನು ಬೇಕಾದರೂ ಕೇಳಬಹುದು. ನಿಮಗದು
ಸಿಗುವುದು. 8ನೀವು ಸಮೃದ್ಧಿಯಾಗಿ ಫಲಕೊಟ್ಟು
ನನ್ನ ಶಿಷ್ಯರಾಗಿ ಬೆಳಗುವುದರಿಂದಲೇ ನನ್ನ ಪಿತನ ಮಹಿಮೆಯು ಪ್ರಕಟವಾಗುವುದು. 9ಪಿತನು ನನ್ನನ್ನು ಪ್ರೀತಿಸಿದಂತೆಯೇ ನಾನೂ ನಿಮ್ಮನ್ನು ಪ್ರೀತಿಸಿದ್ದೇನೆ.
ನನ್ನ ಪ್ರೀತಿಯಲ್ಲಿ ನೆಲೆಗೊಂಡು ನಿಲ್ಲಿರಿ. 10ನನ್ನ ಪಿತನು ಕೊಟ್ಟ ಆಜ್ಞೆಗಳನ್ನು
ಪಾಲಿಸಿ ಅವರ ಪ್ರೀತಿಯಲ್ಲಿ ನಾನು ನೆಲೆಗೊಂಡಿರುವ ಹಾಗೆ ನೀವೂ ಕೂಡ ನಾನು ಕೊಟ್ಟ ಆಜ್ಞೆಗಳನ್ನು ಪಾಲಿಸಿ
ನನ್ನ ಪ್ರೀತಿಯಲ್ಲಿ ನೆಲೆಗೊಂಡಿರುವಿರಿ."
11"ನನ್ನಲ್ಲಿರುವ
ಆನಂದವು ನಿಮ್ಮಲ್ಲಿ ಇರಬೇಕೆಂದೂ ನಿಮ್ಮ ಆನಂದವು ತುಂಬಿ ತುಳುಕಬೇಕೆಂದೂ ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ.
12ನಾನು ಕೊಡುವ ಆಜ್ಞೆಯೇನೆಂದರೆ:
ನಾನು ನಿಮ್ಮನ್ನು ಪ್ರೀತಿಸಿದಂತೆಯೇ ನೀವೂ ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. 13ಗೆಳೆಯರಿಗಾಗಿ ತನ್ನ ಪ್ರಾಣವನ್ನೇ ಧಾರೆಯೆರೆಯುವ ಪ್ರೀತಿಗಿಂತ ಮಿಗಿಲಾದ
ಪ್ರೀತಿ ಯಾರಲ್ಲೂ ಇಲ್ಲ. 14ನಾನು ಆಜ್ಞಾಪಿಸಿದಂತೆ ನಡೆದರೆ
ನೀವು ನನ್ನ ಗೆಳೆಯರು. 15ನಾನಿನ್ನು ನಿಮ್ಮನ್ನು ದಾಸರೆಂದು
ಕರೆಯುವುದಿಲ್ಲ. ದಣಿಯ ಕೆಲಸಕಾರ್ಯಗಳು ದಾಸನಿಗೆ ತಿಳಿಯವು. ಆದರೆ ನಾನು ಪಿತನಿಂದ ಕೇಳಿಸಿಕೊಂಡದ್ದನ್ನೆಲ್ಲಾ
ನಿಮಗೆ ತಿಳಿಸಿದ್ದೇನೆ. ಈ ಕಾರಣ ನಿಮ್ಮನ್ನು ಗೆಳೆಯರೆಂದು ಕರೆದಿದ್ದೇನೆ. 16ನೀವು ನನ್ನನ್ನು ಆರಿಸಿಕೊಳ್ಳಲಿಲ್ಲ. ನಾನೇ ನಿಮ್ಮನ್ನು ಆರಿಸಿಕೊಂಡಿದ್ದೇನೆ.
ನೀವು ಲೋಕಕ್ಕೆ ಹೋಗಬೇಕು, ಸಫಲರಾಗಬೇಕು; ಆ ಫಲವು ಶಾಶ್ವತವಾಗಿರಬೇಕೆಂದೇ ನಿಮ್ಮನ್ನು ನೇಮಿಸಿದ್ದೇನೆ.
ಹೀಗಿರಲಾಗಿ ನೀವು ನನ್ನ ಹೆಸರಿನಲ್ಲಿ ಪಿತನಿಂದ ಏನನ್ನು ಕೇಳಿದರೂ ನಿಮಗೆ ಅದು ಸಿಗುವುದು. 17ನೀವು ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬುದೇ ನಾನು ನಿಮಗೆ ಕೊಡುವ ಆಜ್ಞೆ."
ದ್ವೇಷದಿಂದ ಕೂಡಿದ ಲೋಕ
18ಲೋಕವು
ನಿಮ್ಮನ್ನು ದ್ವೇಷಿಸಿದರೆ, ನನ್ನ ಮೇಲೆ ಅದಕ್ಕೆ ಮೊದಲೇ ದ್ವೇಷವಿತ್ತೆಂಬುದನ್ನು ನೆನಪಿನಲ್ಲಿಡಿ.
19ನೀವೂ ಲೋಕದ ಕಡೆಯವರಾಗಿದ್ದರೆ
ಲೋಕವು ನಿಮ್ಮನ್ನು ತನ್ನವರೆಂದು ಮಮತೆಯಿಂದ ಕಾಣುತ್ತಿತ್ತು. ಆದರೆ ನೀವು ಲೋಕದ ಕಡೆ ಸೇರಿದವರಲ್ಲ.
ನಾನು ನಿಮ್ಮನ್ನು ಆರಿಸಿಕೊಂಡಿರುವುದರಿಂದ ನೀವು ಲೋಕದಿಂದ ಬೇರ್ಪಟ್ಟಿದ್ದೀರಿ. ಅದಕ್ಕಾಗಿಯೇ ಲೋಕಕ್ಕೆ
ನಿಮ್ಮ ಮೇಲೆ ದ್ವೇಷವಿದೆ. 20ಧಣಿಗಿಂತಲೂ ದಾಸನು ದೊಡ್ಡವನಲ್ಲವೆಂದು
ನಾನು ನಿಮಗೆ ಹೇಳಿದ್ದನ್ನು ನೆನಪಿಗೆ ತಂದುಕೊಳ್ಳಿ. ನನ್ನನ್ನು ಅವರು ಹಿಂಸೆಗೆ ಗುರಿಮಾಡುವರು. ನನ್ನ
ಬೋಧನೆಯ ಮಾತನ್ನು ಅವರು ಅನುಸರಿಸಿ ನಡೆದರೆ ನಿಮ್ಮ ಬೋಧನೆಯ ಮಾತನ್ನು ಅನುಸರಿಸಿ ನಡೆಯುವರು. 21ನೀವು ನನ್ನವರಾದುದರಿಂದ ಅವರು ನಿಮ್ಮನ್ನು ಹೀಗೆ ಕಾಣುವರು. ಏಕೆಂದರೆ ನನ್ನನ್ನು
ಕಳುಹಿಸಿದಾತನನ್ನು ಅವರು ಅರಿಯರು. 22ನಾನು ಬಂದು ಅವರಿಗೆ ಬೋಧನೆ
ಮಾಡದೆ ಹೋಗಿದ್ದರೆ ಅವರು ಪಾಪದೋಷಿಗಳು ಎಂದು ಹೇಳಲಾಗುತ್ತಿರಲಿಲ್ಲ. ಆದರೆ ಈಗ ಅವರ ದೋಷಕ್ಕೆ ಯಾವ
ನೆಪವನ್ನೂ ಒಡ್ಡುವಂತಿಲ್ಲ. 23ನನ್ನ ಮೇಲೆ ದ್ವೇಷವಿದ್ದವನಿಗೆ
ನನ್ನ ಪಿತನ ಮೇಲೂ ದ್ವೇಷವಿದೆ. 24ಬೇರೆ ಯಾರೂ ಮಾಡದ ಮಹತ್ತಾದ
ಕಾರ್ಯಗಳನ್ನು ನಾನು ಅವರ ನಡುವೆ ಮಾಡದೇ ಹೋಗಿದ್ದರೆ ಅವರು ಪಾಪದೋಷಿಗಳೆಂದು ಹೇಳಲಾಗುತ್ತಿರಲಿಲ್ಲ.
ಆದರೆ ಅವರು ನನ್ನ ಕಾರ್ಯಗಳನ್ನು ನೋಡಿಯೂ ಸಹ ನನ್ನ ಮೇಲೆಯೂ ನನ್ನ ಪಿತನ ಮೇಲೆಯೂ ದ್ವೇಷ ಬೆಳೆಸಿದ್ದಾರೆ.
25'ನಿಷ್ಕಾರಣವಾಗಿ ಅವರು ನನ್ನನ್ನು
ದ್ವೇಷಿಸಿದರು' ಎಂದು ಅವರ ಧರ್ಮಶಾಸ್ತ್ರದಲ್ಲೇ ಬರೆದಿರುವುದು ಹೀಗೆ ನೆರವೇರಿದೆ. 26ಪಿತನಿಂದ ಹೊರಡುವ ಸತ್ಯಸ್ವರೂಪಿಯಾದ ಪವಿತ್ರಾತ್ಮರನ್ನು ನಿಮ್ಮ ಪೋಷಕರನ್ನಾಗಿ
ನಾನು ಪಿತನಿಂದಲೇ ಕಳುಹಿಸುವೆನು. ಅವರು ಬಂದು ನನ್ನ ಪರವಾಗಿ ಸಾಕ್ಷಿ ನೀಡುವರು. 27ಮೊತ್ತಮೊದಲಿನಿಂದಲೂ ನನ್ನ ಸಂಗಡ ಇದ್ದ ನೀವೂ ಕೂಡ ನನ್ನನ್ನು ಕುರಿತಾಗಿ ಸಾಕ್ಷಿ ನೀಡುವವರಾಗಿದ್ದೀರಿ."
ಅಧ್ಯಾಯಗಳು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ