ವಿಶ್ವಾಸ ಕುಸಿಯದಂತೆ ಎಚ್ಚರಿಕೆ
1"ನಿಮ್ಮ
ವಿಶ್ವಾಸವು ಕುಸಿಯದಂತೆ ನೀವು ಎಚ್ಚರಿಕೆ ವಹಿಸಬೇಕೆಂದು ನಾನು ಇದನ್ನೆಲ್ಲಾ ನಿಮಗೆ ಹೇಳುತ್ತಿದ್ದೇನೆ.
2ಜನರು ನಿಮ್ಮನ್ನು ಪ್ರಾರ್ಥನಾಮಂದಿರದಿಂದ ಬಹಿಷ್ಕರಿಸುತ್ತಾರೆ.
ಅಷ್ಟೇ ಅಲ್ಲ, ನಿಮ್ಮನ್ನು ಕೊಲ್ಲುವವನು ತಾನು ದೇವರಿಗೆ ಬಲಿಕೊಟ್ಟನೆಂದು ಭಾವಿಸುವ ಕಾಲವು ಬರಲಿದೆ.
3ನನ್ನನ್ನಾಗಲಿ, ಪಿತನನ್ನಾಗಲಿ ಅವರು ಅರಿತಿಲ್ಲದ
ಕಾರಣ ನಿಮಗೆ ಹೀಗೆ ಮಾಡುವರು. 4ಅಂತಹ ಕಾಲ ಬಂದಾಗ ಇದನ್ನೆಲ್ಲಾ
ಕುರಿತು ನಾನು ನಿಮ್ಮನ್ನು ಮೊದಲೇ ಎಚ್ಚರಿಸಿದ್ದೇನೆಂದು ನೀವು ನೆನೆಸಿಕೊಳ್ಳುವಂತೆ ಇದನ್ನು ಹೇಳುತ್ತಿದ್ದೇನೆ."
ಪವಿತ್ರಾತ್ಮರ ಆಗಮನ
5"ನಾನು ನಿಮ್ಮ ಸಂಗಡ ಇದ್ದುದರಿಂದ
ಇದನ್ನೆಲ್ಲಾ ಮೊದಲೇ ನಿಮಗೆ ತಿಳಿಸಲಿಲ್ಲ. ಆದರೆ ಈಗ ನನ್ನನ್ನು ಕಳುಹಿಸಿದಾತನಲ್ಲಿಗೆ ನಾನು ತೆರಳುತ್ತೇನೆ.
ನಾನು ಹೋಗುವುದೆಲ್ಲಿಗೆ ಎಂದು ನೀವು ಯಾರೂ ಕೇಳುತ್ತಿಲ್ಲವಾದರೂ 6ಇದನ್ನೆಲ್ಲಾ ನಾನು ನಿಮಗೆ ಹೇಳಿದ್ದರಿಂದ ನಿಮ್ಮ ಹೃದಯವು ದುಃಖಭರಿತವಾಗಿದೆ.
7ವಾಸ್ತವವಾಗಿ ಹೇಳುವುದಾದರೆ ನಾನು ಹೋಗುವುದು ನಿಮ್ಮ
ಹಿತಕ್ಕಾಗಿಯೇ. ನಾನು ಹೋಗದಿದ್ದರೆ, ಪೋಷಕ ನಿಮ್ಮಲ್ಲಿಗೆ ಬರುವುದಿಲ್ಲ. ನಾನು ಹೋದರೆ ಮಾತ್ರ ಅವರನ್ನು
ನಿಮ್ಮಲ್ಲಿಗೆ ಕಳುಹಿಸಿಕೊಡಬಲ್ಲೆ. 8ಆ ಪೋಷಕ ಬಂದು ಪಾಪ, ನ್ಯಾಯನೀತಿ
ಮತ್ತು ಅಂತಿಮತೀರ್ಪು ಇವುಗಳನ್ನು ಕುರಿತು ಲೋಕದ ಜನತೆಯು ತಾಳಿದ್ದ ತಪ್ಪು ಭಾವನೆಗಳನ್ನು ಮನವರಿಕೆ
ಮಾಡಿಕೊಡುವರು. 9ಪಾಪದ ವಿಷಯವಾಗಿ ಅವರ ತಪ್ಪುಭಾವನೆಗಳನ್ನು
ಮನವರಿಕೆ ಮಾಡಿಕೊಡುವರು. ಏಕೆಂದರೆ ಅವರು ನನ್ನಲ್ಲಿ ವಿಶ್ವಾಸವಿಡಲಿಲ್ಲ. 10ನ್ಯಾಯನೀತಿಯ ವಿಷಯವಾಗಿ ಅವರ ತಪ್ಪುಭಾವನೆಯನ್ನು ಮನವರಿಕೆ ಮಾಡಿಕೊಡುವರು.
ಏಕೆಂದರೆ ನಾನು ಪಿತನ ಬಳಿಗೆ ಹೋಗುತ್ತೇನೆ ಮತ್ತು ನೀವು ನನ್ನನ್ನು ಕಾಣಲಾರಿರಿ. 11ಅಂತಿಮತೀರ್ಪಿನ ವಿಷಯವಾಗಿ ಅವರ ತಪ್ಪುಭಾವನೆಗಳನ್ನು ಮನವರಿಕೆ ಮಾಡಿಕೊಡುವರು.
ಏಕೆಂದರೆ ಇಹದ ಲೋಕಾಧಿಪತಿಗೆ ಈಗಾಗಲೇ ನ್ಯಾಯತೀರ್ಪನ್ನು ಕೊಡಲಾಗಿದೆ. 12ನಾನು ನಿಮಗೆ ಹೇಳಬೇಕಾದುದು ಇನ್ನೂ ಎಷ್ಟೋ ಇದೆ. ಸಧ್ಯಕ್ಕೆ ಅವು ನಿಮಗೆ
ಹೊರಲಾರದ ಹೊರೆಯಾಗಬಾರದು. 13ಹೇಗೂ ಸತ್ಯಸ್ವರೂಪಿಯಾದ ಪವಿತ್ರಾತ್ಮರು
ಬಂದಮೇಲೆ ನಿಮ್ಮನ್ನು ಸಮಗ್ರ ಸತ್ಯದೆಡೆಗೆ ಕರೆದೊಯ್ಯುವರು. ಅವರು ತಮ್ಮಷ್ಟಕ್ಕೆ ತಾವೇ ಏನನ್ನೂ ಬೋಧಿಸದೆ
ತಾವು ಕೇಳಿದುದನ್ನು ಕುರಿತೇ ಮಾತನಾಡುವವರು; ಮುಂದೆ ನಡೆಯಲಿರುವುದನ್ನೂ ನಿಮಗೆ ತಿಳಿಸುವರು. 14ಅವರು ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸಿ ನನ್ನ ಮಹಿಮೆಯನ್ನು
ಬೆಳಗಿಸುವರು. 15ಪಿತನದಾಗಿ ಇರುವುದೆಲ್ಲವೂ ನನ್ನದೇ.
ಆದುದರಿಂದ ಪವಿತ್ರಾತ್ಮರು ನಾನು ಹೇಳಿದವುಗಳಿಂದಲೇ ಆಯ್ದು ನಿಮಗೆ ತಿಳಿಯಪಡಿಸುವರೆಂದು ನಾನು ಹೇಳಿದ್ದು."
ನೋವು ನಲಿವು
16"ತುಸು
ಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ,"
ಎಂದರು ಯೇಸು.
17ಇದನ್ನು
ಕೇಳಿದ ಕೆಲವು ಮಂದಿ ಶಿಷ್ಯರು,
"ಇದೇನು ಇವರು ಹೇಳುತ್ತಿರುವುದು? 'ತುಸು ಕಾಲವಾದ
ನಂತರ ನೀವು ನನ್ನನ್ನು ಕಾಣಲಾರಿರಿ. ಅನಂತರ ತುಸುಕಾಲ ಕಳೆಯುತ್ತಲೇ ನೀವು ನನ್ನನ್ನು ಪುನಃ ಕಾಣುವಿರಿ
ಮತ್ತು ಪಿತನಲ್ಲಿಗೆ ನಾನು ಹೋಗುತ್ತೇನೆ,' ಎನ್ನುತ್ತಾರಲ್ಲ? 18'ತುಸುಕಾಲ' ಎಂದರೇನು? ಇವರ ಮಾತೇ ನಮಗೆ ಅರ್ಥವಾಗುತ್ತಿಲ್ಲವಲ್ಲಾ,"
ಎಂದು ತಮ್ಮತಮ್ಮೊಳಗೆ ಮಾತನಾಡತೊಡಗಿದರು. 19ಯೇಸು, ತಮ್ಮಲ್ಲಿ ಅವರು ಏನನ್ನು ವಿಚಾರಿಸಬೇಕೆಂದಿದ್ದಾರೆಂದು ತಿಳಿದುಕೊಂಡು,
" 'ತುಸು ಕಾಲವಾದ ನಂತರ ನೀವು ನನ್ನನ್ನು ಕಾಣಲಾರಿರಿ.
ಅನಂತರ ತುಸುಕಾಲ ಕಳೆಯುತ್ತಲೇ ನನ್ನನ್ನು ಪುನಃ ಕಾಣುವಿರಿ' ಎಂದು ನಾನು ಹೇಳಿದ್ದನ್ನು ಕುರಿತು ನಿಮ್ಮನಿಮ್ಮಲ್ಲಿಯೇ
ನೀವು ಚರ್ಚಿಸುತ್ತಿರುವಿರೇನು? 20ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ;
ನೀವು ಅತ್ತು ಗೋಳಾಡುವಿರಿ; ಆದರೆ ಲೋಕವು ನಕ್ಕುನಲಿದಾಡುವುದು. ನೀವು ದುಃಖಪಡುವಿರಿ. ಆದರೆ ನಿಮ್ಮ
ದುಃಖವು ಆನಂದವಾಗಿ ಮಾರ್ಪಡುವುದು. 21ಗರ್ಭಿಣಿಯಾದ ಸ್ತ್ರೀಯು ಪ್ರಸವಿಸುವ
ಘಳಿಗೆ ಬಂದಾಗ ವೇದನೆ ಪಡುತ್ತಾಳೆ; ಮಗುವನ್ನು ಹೆರುತ್ತಲೇ ಜಗದಲ್ಲಿ ಮಾನವನೊಬ್ಬನು ಜನಿಸಿದನೆಂಬ ಉಲ್ಲಾಸದಿಂದ
ತಾನು ಪಟ್ಟ ವೇದನೆಯನ್ನು ಮರೆತುಬಿಡುತ್ತಾಳೆ. 22ನಿಮಗೆ ಈಗ ದುಃಖವಿದೆ; ನಾನು
ನಿಮ್ಮನ್ನು ಮರಳಿ ಕಂಡಾಗ ಹರ್ಷಿಸುವಿರಿ. ಆ ಹರ್ಷವನ್ನು ಯಾರೂ ನಿಮ್ಮಿಂದ ಕಸಿದುಕೊಳ್ಳುವುದಿಲ್ಲ.
23ಆ ದಿನದಂದು ನನ್ನಿಂದ ನೀವೇನನ್ನೂ
ಕೇಳುವಂತಿಲ್ಲ. ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ; ನೀವು ಪಿತನಲ್ಲಿ ಏನನ್ನು ಬೇಡಿಕೊಂಡರೂ ನಿಮಗೆ
ಅವರು ನನ್ನಹೆಸರಿನಲ್ಲಿ ಕೊಟ್ಟೇತೀರುವರು. 24ಈ ತನಕ ನನ್ನ ಹೆಸರಿನಲ್ಲಿ ನೀವೇನನ್ನೂ
ಕೇಳಲಿಲ್ಲ. ಕೇಳಿರಿ, ನಿಮಗೆ ದೊರಕುವುದು. ಆಗ ನಿಮ್ಮ ಆನಂದವು ತುಂಬಿತುಳುಕುವುದು."
ಲೋಕದ ಮೇಲೆ ವಿಜಯ
25"ಈ
ಸಂಗತಿಗಳನ್ನೆಲ್ಲಾ ನಿಮಗೆ ಸಾಮತಿಗಳ ರೂಪದಲ್ಲಿ ತಿಳಿಸಿರುವೆನು. ಕಾಲವು ಬರಲಿದೆ. ಆಗ ಸಾಮತಿಗಳನ್ನು
ಬಳಸದೆ ಸ್ಪಷ್ಟವಾದ ಮಾತಿನಲ್ಲಿ ಪಿತನನ್ನು ಕುರಿತು ನಿಮಗೆ ತಿಳಿಸುವೆನು. 26ಆ ಕಾಲವು ಬಂದಾಗ ನನ್ನ ಹೆಸರನ್ನು ಹೇಳಿ ನೀವೇ ಪಿತನಲ್ಲಿ ಬೇಡುವಿರಿ. ನಿಮ್ಮ
ಪರವಾಗಿ ನಾನು ಪಿತನಲ್ಲಿ ಬೇಡಿಕೊಳ್ಳುವೆನೆಂದು ನಾನು ಹೇಳುವುದಿಲ್ಲ. 27ಕಾರಣ, ಪಿತನೇ ನಿಮ್ಮನ್ನು ಪ್ರೀತಿಸುತ್ತಾರೆ. ನೀವು ನನ್ನನ್ನು ಪ್ರೀತಿಸಿ
ನಾನು ಅವರಿಂದ ಬಂದೆನೆಂದು ವಿಶ್ವಾಸಿಸಿದ್ದರಿಂದ ಪಿತನಿಗೆ ನಿಮ್ಮ ಮೇಲೆ ಅಕ್ಕರೆಯಾಗಿದೆ. 28ಹೌದು, ನಾನು ಪಿತನಿಂದಲೇ ಹೊರಟು ಈ ಲೋಕಕ್ಕೆ ಬಂದಿದ್ದೇನೆ. ಈಗ ಈ ಲೋಕವನ್ನು
ಬಿಟ್ಟು ಪಿತನಲ್ಲಿಗೆ ಹೋಗುತ್ತಿದ್ದೇನೆ,"
ಎಂದರು. 2
9ಅದಕ್ಕೆ
ಶಿಷ್ಯರು,
"ಈಗ ನೀವು ಸಾಮತಿಗಳನ್ನು ಬಳಸದೆ ಸ್ಪಷ್ಟವಾಗಿಯೇ ಮಾತನಾಡುತ್ತಿದ್ದೀರಿ.
30ನೀವು ಎಲ್ಲವನ್ನೂ ಬಲ್ಲವರು.
ಪ್ರಶ್ನೆಗಳಿಗಾಗಿ ನೀವು ಕಾಯಬೇಕಿಲ್ಲ ಎಂದು ನಮಗೀಗ ತಿಳಿಯಿತು. ಆದುದರಿಂದ ನೀವು ದೇವರಿಂದ ಬಂದವರೆಂದು
ನಾವು ವಿಶ್ವಾಸಿಸುತ್ತೇವೆ,"
ಎಂದರು.
31ಆಗ
ಯೇಸು,
"ಈಗ ನೀವು ವಿಶ್ವಾಸಿಸುತ್ತೀರಾ? 32ನೀವೆಲ್ಲರೂ ನನ್ನನ್ನು ಒಂಟಿಯಾಗಿ ಬಿಟ್ಟು ನಿಮ್ಮನಿಮ್ಮ ಮನೆಗೆ ಚದುರಿಹೋಗುವ
ಕಾಲವು ಬರುತ್ತದೆ. ಈಗಾಗಲೇ ಬಂದಿದೆ. ಆದರೆ ಪಿತನು ನನ್ನೊಡನೆ ಇರುವುದರಿಂದ ನಾನು ಒಂಟಿಯಲ್ಲ. 33ನಿಮಗೆ ನನ್ನಿಂದ ಶಾಂತಿಸಮಾಧಾನ ಲಭಿಸಲೆಂದು ನಾನು ಇದನ್ನೆಲ್ಲಾ ಹೇಳುತ್ತಿದ್ದೇನೆ.
ಲೋಕದಲ್ಲಿ ನಿಮಗೆ ಕಷ್ಟಸಂಕಟಗಳು ತಪ್ಪಿದ್ದಲ್ಲ, ಆದರೆ ಧೈರ್ಯವಾಗಿರಿ. ನಾನು ಲೋಕವನ್ನು ಜಯಿಸಿದ್ದೇನೆ,"
ಎಂದು ಹೇಳಿದರು.
ಅಧ್ಯಾಯಗಳು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ