ಅಧ್ಯಾಯ 18


ಯೇಸುವಿನ ಬಂಧನ
(ಮತ್ತಾಯ ೨೬:೪೭-೫೬; ಮಾರ್ಕ ೧೪:೪೩-೫೦; ಲೂಕ ೨೨:೪೭-೫೩)

1ಯೇಸು ಹೀಗೆ ಹೇಳಿದ ಬಳಿಕ ತಮ್ಮ ಶಿಷ್ಯರೊಡನೆ ಹೊರಟು, ಕೆದ್ರೋನ್‌ ಹಳ್ಳವನ್ನು ದಾಟಿ, ಅಲ್ಲೇ ಇದ್ದ ತೋಟವನ್ನು ಹೊಕ್ಕರು. 2ಅವರು ತಮ್ಮ ಶಿಷ್ಯರೊಡನೆ ಆಗಾಗ ಅಲ್ಲಿಗೆ ಬರುವುದು ವಾಡಿಕೆ. ಅವರನ್ನು ಹಿಡಿದುಕೊಡಲಿದ್ದ ಯೂದನಿಗೆ ಆ ಸ್ಥಳವು ಚೆನ್ನಾಗಿ ಗೊತ್ತಿತ್ತು. 3ಆದುದರಿಂದ ಯೂದನು ಸೈನಿಕರ ಒಂದು ತಂಡವನ್ನೂ ಮುಖ್ಯಯಾಜಕರು ಮತ್ತು ಫರಿಸಾಯರು ಕಳುಹಿಸಿದ ಕಾವಲಾಳುಗಳನ್ನೂ ಕರೆದುಕೊಂಡು ದೀವಟಿಗೆ, ಪಂಜು ಮತ್ತು ಆಯುಧಗಳ ಸಮೇತ ಅಲ್ಲಿಗೆ ಬಂದರು. 4ಯೇಸುವಿಗೆ ತಮಗೇನು ಸಂಭವಿಸಲಿದೆ ಎಂಬುದೆಲ್ಲಾ ತಿಳಿದಿತ್ತು. ಹಾಗಾಗಿಯೇ ಅವರು ಮುಂದೆ ಬಂದು,
"ಯಾರನ್ನು ಹುಡುಕುತ್ತಿದ್ದೀರಿ?"
ಎಂದು ಕೇಳಿದರು.
5ಅವರು,
"ನಜರೇತಿನ ಯೇಸುವನ್ನು,"
ಎಂದರು.
ಅದಕ್ಕೆ ಯೇಸು,
6"ನಾನೇ ಆತನು,"
ಎಂದು ಉತ್ತರಕೊಟ್ಟರು. ಅವರನ್ನು ಹಿಡಿದುಕೊಡಲಿದ್ದ ಗುರುದ್ರೋಹಿ ಯೂದನು ಅವರ ಸಂಗಡವೇ ನಿಂತುಕೊಂಡಿದ್ದನು. 'ನಾನೇ ಆತನು' ಎಂದು ಯೇಸು ನುಡಿಯುತ್ತಲೇ, ಅವರೆಲ್ಲರೂ ಹಿಂದಕ್ಕೆ ಸರಿದು ನೆಲದ ಮೇಲೆ ಬಿದ್ದರು. 7ಯೇಸು ಮತ್ತೊಮ್ಮೆ,
"ನೀವು ಯಾರನ್ನು ಹುಡುಕುತ್ತಿದ್ದೀರಿ?"
ಎಂದು ಕೇಳಲು,
"ನಜರೇತಿನ ಯೇಸುವನ್ನು"
ಎಂಬ ಉತ್ತರ ಬಂದಿತು.
8ಅದಕ್ಕೆ ಯೇಸು,
"ನಾನೇ ಆತನೆಂದು ನಿಮಗೆ ಆಗಲೇ ಹೇಳಿದೆ. ನೀವು ಹುಡುಕುತ್ತಿರುವುದು ನನ್ನನ್ನೇ ಆದರೆ ಮಿಕ್ಕ ಇವರನ್ನು ಹೋಗಲು ಬಿಡಿರಿ,"
ಎಂದು ನುಡಿದರು. 9('ನೀವು ನನಗೆ ಕೊಟ್ಟವರಲ್ಲಿ ಒಬ್ಬನನ್ನಾದರೂ ಕಳೆದುಕೊಳ್ಳಲಿಲ್ಲ' ಎಂದು ತಾವೇ ನುಡಿದ ಮಾತು ನೆರವೇರುವಂತೆ ಯೇಸು ಹೀಗೆಂದರು). 10ಅಷ್ಟರಲ್ಲಿ ಸಿಮೋನ ಪೇತ್ರನು ತನ್ನಲ್ಲಿದ್ದ ಖಡ್ಗವನ್ನು ಹಿರಿದು, ಪ್ರಧಾನ ಯಾಜಕನ ಸೇವಕನಾದ ಮಾಲ್ಕನ ಬಲಗಿವಿಯನ್ನು ಕತ್ತರಿಸಿಬಿಟ್ಟನು. 11ಆಗ ಯೇಸು ಪೇತ್ರನಿಗೆ,
"ನಿನ್ನ ಖಡ್ಗವನ್ನು ಒರೆಯಲ್ಲಿ ಹಾಕು. ನನ್ನ ಪಿತನೇ ಕೊಟ್ಟಿರುವ ಕಷ್ಟದ ಕೊಡವಿದು; ಇದರಲ್ಲಿರುವುದನ್ನು ನಾನು ಕುಡಿಯದೇ ಹೋದರೆ ಹೇಗೆ?"
ಎಂದು ನುಡಿದರು.
                                                                                                                                                                                                                                                                                                                                                                       
ಅನ್ನನ ಮುಂದೆ ಯೇಸು

12ಅನಂತರ ಸೈನಿಕರೂ ಸಹಸ್ರಾಧಿಪತಿಯೂ ಯೆಹೂದ್ಯರು ಕಳುಹಿಸಿದ ಕಾವಲಾಳುಗಳು ಯೇಸುವನ್ನು ಹಿಡಿದು ಕಟ್ಟಿ ಮೊದಲು ಅನ್ನನ ಬಳಿಗೆ ಕೊಂಡೊಯ್ದರು. 13ಅನ್ನನು ಆ ವರ್ಷ ಪ್ರಧಾನಯಾಜಕನಾಗಿದ್ದ ಕಾಯಫನ ಮಾವ. 14ಸಮಸ್ತ ಜನತೆಗೋಸ್ಕರ ಒಬ್ಬನು ಸತ್ತರೆ ವಿಹಿತವೆಂದು ಸಲಹೆ ಕೊಟ್ಟವನು ಈ ಕಾಯಫನೇ.

ಗುರುವನ್ನು ಅಲ್ಲಗೆಳೆದ ಪೇತ್ರ
(ಮತ್ತಾಯ ೨೬:೬೯-೭೦; ಮಾರ್ಕ ೧೪:೬೬-೬೮; ಲೂಕ ೨೨:೫೫-೫೭)
                                                                                               
15ಸಿಮೋನ್‌ ಪೇತ್ರನು ಪ್ರಧಾನಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯನೊಂದಿಗೆ ಯೇಸುವನ್ನು ಹಿಂಬಾಲಿಸುತ್ತಾ ಹೋದನು. ಪರಿಚಿತನಾಗಿದ್ದ ಶಿಷ್ಯನು ಯೇಸುವಿನೊಡನೆ ಪ್ರಧಾನಯಾಜಕನ ಮನೆಯ ಅಂಗಳವನ್ನು ಹೊಕ್ಕನು. 16ಪೇತ್ರನು ಹೊರಗಡೆ ಬಾಗಿಲ ಬಳಿಯೇ ನಿಂತನು. ಪರಿಚಿತನಾಗಿದ್ದವನು ಅನಂತರ ಹೊರಬಂದು ದ್ವಾರಪಾಲಕಿಗೆ ಹೇಳಿ ಪೇತ್ರನನ್ನು ಒಳಕ್ಕೆ ಕರೆದುಕೊಂಡು ಹೋದನು. 17ಆ ದ್ವಾರಪಾಲಕಿಯು ಪೇತ್ರನನ್ನು ನೋಡಿ,
"ನೀನೂ ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?"
ಎಂದು ಕೇಳಿದಳು.
ಅದಕ್ಕೆ ಪೇತ್ರನು,
"ಇಲ್ಲ, ನಾನಲ್ಲ"
ಎಂದುಬಿಟ್ಟನು. 18ಆಗ ಚಳಿಯಿದ್ದುದರಿಂದ ಸೇವಕರೂ ಕಾವಲಾಳುಗಳೂ ಇದ್ದಲಿನ ಬೆಂಕಿ ಮಾಡಿ ಸುತ್ತಲೂ ನಿಂತು ಚಳಿ ಕಾಯಿಸಿಕೊಳ್ಳುತ್ತಿದ್ದರು. ಪೇತ್ರನೂ ಅವರ ಸಂಗಡ ನಿಂತುಕೊಂಡು ಚಳಿ ಕಾಯಿಸಿಕೊಳ್ಳುತ್ತಿದ್ದನು.
ಪ್ರಧಾನಯಾಜಕನಿಂದ ವಿಚಾರಣೆ
(ಮತ್ತಾಯ ೨೬:೫೯-೬೬; ಮಾರ್ಕ ೧೪:೫೫-೬೪; ಲೂಕ ೨೨:೬೬-೭೧)

19ಅಷ್ಟರಲ್ಲಿ ಪ್ರಧಾನಯಾಜಕನು ಯೇಸುವನ್ನು ಅವರ ಶಿಷ್ಯರ ವಿಷಯವಾಗಿಯೂ ಬೋಧನೆಯ ವಿಷಯವಾಗಿಯೂ ವಿಚಾರಿಸಿದನು. 20ಆಗ ಯೇಸು, "ಜನರೆಲ್ಲರೂ ಕೇಳುವಂತೆ ನಾನು ಬಹಿರಂಗವಾಗಿಯೇ ಮಾತನಾಡಿದ್ದೇನೆ; ಯೆಹೂದ್ಯರೆಲ್ಲರೂ ಸಭೆ ಸೇರುವ ಪ್ರಾರ್ಥನಾಮಂದಿರಗಳಲ್ಲೂ ಮಹಾದೇವಾಲಯದಲ್ಲೂ ನಾನು ಯಾವಾಗಲೂ ಬೋಧನೆ ಮಾಡಿಕೊಂಡು ಬಂದಿದ್ದೇನೆ. ಮುಚ್ಚುಮರೆಯಾಗಿ ಏನನ್ನೂ ಹೇಳಿಲ್ಲ. 21ನನ್ನನ್ನು ವಿಚಾರಿಸುವುದೇಕೆ? ನಾನು ಹೇಳಿದ್ದನ್ನು ಯಾರು ಕೇಳಿದ್ದಾರೋ ಅವರನ್ನೇ ವಿಚಾರಿಸಿರಿ. ನಾನು ಬೋಧನೆ ಮಾಡಿದ್ದುದ್ದೇನೆಂದು ಅವರು ಬಲ್ಲರು,"
ಎಂದು ಉತ್ತರಕೊಟ್ಟರು. 22ಯೇಸು ಹೀಗೆ ಹೇಳುವಾಗ ಬಳಿಯಲ್ಲೇ ನಿಂತಿದ್ದ ಕಾವಲುಭಟನೊಬ್ಬನು,
"ಪ್ರಧಾನಯಾಜಕರಿಗೆ ಉತ್ತರಕೊಡುವುದು ಹೀಗಾ?"
ಎನ್ನುತ್ತಾ ಕೆನ್ನೆಗೆ ಹೊಡೆದನು.
23ಆಗ ಯೇಸು,
"ನಾನಾಡಿದ ಮಾತು ತಪ್ಪಾಗಿದ್ದರೆ, ಆ ತಪ್ಪನ್ನು ತೋರಿಸಿಕೊಡು; ಸತ್ಯವಾಗಿದ್ದರೆ ಏಕೆ ಹೊಡೆಯುವೆ?"
ಎಂದರು. 24ಆಗ ಅನ್ನನು ಯೇಸುವನ್ನು ಬಂಧಿಸಿ ಕಾಯಫನ ಬಳಿಗೆ ಕಳುಹಿಸಿದನು.

ಮತ್ತೊಮ್ಮೆ ಅಲ್ಲಗೆಳೆದ ಪೇತ್ರ
(ಮತ್ತಾಯ ೨೬:೭೧-೭೫; ಮಾರ್ಕ ೧೪:೬೯-೭೨; ಲೂಕ ೨೨:೫೮-೬೨)
                                                                                                                       

25ಇತ್ತ ಪೇತ್ರನು ನಿಂತು ಚಳಿಕಾಯಿಸಿಕೊಳ್ಳುತ್ತಾ ಇದ್ದನು. ಅಲ್ಲಿದ್ದವರು,
"ನೀನು ಯೇಸುವಿನ ಶಿಷ್ಯರಲ್ಲಿ ಒಬ್ಬನಲ್ಲವೇ?"
ಎಂದು ಕೇಳಿದರು.
ಪೇತ್ರನು,
"ಇಲ್ಲ, ನಾನು ಶಿಷ್ಯನಲ್ಲ,"
ಎಂದು ನಿರಾಕರಿಸಿದನು. 26ಪ್ರಧಾನಯಾಜಕನ ಸೇವಕರಲ್ಲಿ ಒಬ್ಬನು(ಪೇತ್ರನು ಯಾರ ಕಿವಿಯನ್ನು ಕತ್ತರಿಸಿದನೋ ಅವನ ನೆಂಟನೀತ),
"ನಿನ್ನನ್ನು ಆತನೊಡನೆ ತೋಟದಲ್ಲಿ ನಾನು ನೋಡಲಿಲ್ಲವಾ?"
ಎಂದು ಕೇಳಿದನು. 27ಪೇತ್ರನು ಪುನಃ ಅಲ್ಲಗೆಳೆದನು. ಕೂಡಲೇ ಕೋಳಿ ಕೂಗಿತು.

ಪಿಲಾತನ ಮುಂದೆ ಯೇಸು
(ಮತ್ತಾಯ ೨೭:೧-೨; ೧೧-೧೪; ಮಾರ್ಕ ೧೫:೧-೫; ಲೂಕ ೨೩:೧-೫)
                                                                                                                                                                                               
28ಆಮೇಲೆ ಅವರು ಯೇಸುವನ್ನು ಕಾಯಫನ ಮನೆಯಿಂದ ರಾಜ್ಯಪಾಲನ ನಿವಾಸಕ್ಕೆ ಕೊಂಡೊಯ್ದರು. ಆಗ ಮುಂಜಾನೆ ಅರಮನೆಯೊಳಗೆ ಹೋದರೆ ಮಡಿಗೆಟ್ಟು ಹಬ್ಬದೂಟಕ್ಕೆ ಅಡ್ಡಿಯಾದೀತೆಂದು ಹೊರಗೆ  ನಿಂತರು. 29ಆದುದರಿಂದ ಪಿಲಾತನೇ ಅವರ ಬಳಿಗೆ ಬಂದು,
"ಈತನ ಮೇಲೆ ನಿಮ್ಮ ದೂರೇನು?"
ಎಂದು ಕೇಳಿದನು.
30ಅವರು,
"ಇವನು ಅಪರಾದಿಯಲ್ಲದಿದ್ದರೆ ಇವನನ್ನು ನಿಮ್ಮಲ್ಲಿಗೆ ತಂದೊಪ್ಪಿಸುತ್ತಿರಲಿಲ್ಲ,"
ಎಂದರು.
31ಅದಕ್ಕೆ ಪಿಲಾತನು,
"ಹಾಗಾದರೆ ನೀವೇ ಕರೆದುಕೊಂಡು ಹೋಗಿ ನಿಮ್ಮ ಧರ್ಮಶಾಸ್ತ್ರದ ಪ್ರಕಾರ ಈತನಿಗೆ ತೀರ್ಪುಕೊಡಿ,"
ಎಂದನು. ಯೆಹೂದ್ಯರು,
"ಮರಣದಂಡನೆ ವಿಧಿಸುವ ಅಧಿಕಾರ ನಮಗಿಲ್ಲವಲ್ಲಾ,"
ಎಂದು ಉತ್ತರಿಸಿದರು. 32ಯೇಸು ತಮಗೆ ಯಾವ ಬಗೆಯ ಮರಣ ಕಾದಿರುವುದೆಂದು ಸೂಚಿಸಿ ಹೇಳಿದ ಮಾತು ನೆರವೇರುವಂತಾಯಿತು. 33ಆಗ ಪಿಲಾತನು ಅರಮನೆಯೊಳಕ್ಕೆ ಹೋಗಿ ಯೇಸುವನ್ನು ಕರೆಯಿಸಿ,
"ಯೆಹೂದ್ಯರ ಅರಸನೋ ನೀನು?"
ಎಂದು ಕೇಳಿದನು. 34ಅದಕ್ಕೆ ಯೇಸು, "ನೀವಾಗಿಯೇ ಇದನ್ನು ಹೇಳುತ್ತಿರುವಿರಾ ಅಥವಾ ಬೇರೆ ಯಾರಾದರೂ ನನ್ನನ್ನು ಕುರಿತು ಹೀಗೆ ಹೇಳಿದರೇ?"
ಎನ್ನಲು 35ಪಿಲಾತನು,
"ನಾನೇನು ಯೆಹೂದ್ಯನೇ? ನಿನ್ನ ಸ್ವಂತ ಜನರು ಮತ್ತು ಮುಖ್ಯಯಾಜಕರು ನಿನ್ನನ್ನು ನನ್ನ ಕೈಗೆ ಒಪ್ಪಿಸಿರುವರು. ನೀನು ಮಾಡಿದ್ದಾದರೂ ಏನು?"
ಎಂದು ಕೇಳಿದನು.
36ಅದಕ್ಕೆ ಯೇಸು,
"ನನ್ನ ಸಾಮ್ರಾಜ್ಯವು ಈ ಲೋಕದ್ದಲ್ಲ. ನನ್ನ ಸಾಮ್ರಾಜ್ಯವು ಈ ಲೋಕದ್ದಾಗಿದ್ದರೆ, ಯೆಹೂದ್ಯರ ಕೈಗೆ ಬೀಳದಂತೆ ನನ್ನ ಅನುಯಾಯಿಗಳು ಕಾದಾಡುತ್ತಿದ್ದರು. ನಿಜವಾಗಿಯೂ ನನ್ನ ಸಾಮ್ರಾಜ್ಯ ಇಹಲೋಕದ್ದಲ್ಲ,"
ಎಂದರು.
37ಪಿಲಾತನು,                                                                                                                                                                    
"ಹಾಗಾದರೆ ನೀನೊಬ್ಬ ಅರಸನಾ?"
ಎಂದು ಕೇಳಲು ಯೇಸು,
"ಅರಸ ಎನ್ನುವುದು ನೀವು ಹೇಳುವ ಮಾತು. ಸತ್ಯವನ್ನು ಕುರಿತು ಸಾಕ್ಷಿ ಹೇಳುವುದು ನನ್ನ ಕೆಲಸ. ಅದಕ್ಕಾಗಿಯೇ ನಾನು ಹುಟ್ಟಿದ್ದು. ಅದಕ್ಕಾಗಿಯೇ ನಾನು ಜಗತ್ತಿಗೆ ಬಂದಿದ್ದು. ಸತ್ಯಪರರೆಲ್ಲರೂ ನನ್ನ ಮಾತಿಗೆ ಕಿವಿಗೊಡುತ್ತಾರೆ,"
ಎಂದು ಹೇಳಿದರು.
38ಆಗ ಪಿಲಾತನು,
"ಸತ್ಯ? ಸತ್ಯವೆಂದರೆ ಏನು?"
ಎಂದು ಪ್ರಶ್ನಿಸಿ ಅಲ್ಲಿ ನಿಲ್ಲದೆ ಹೊರಗೆ ಬಂದನು.

ಯೇಸುವಿಗೆ ಮರಣದಂಡನೆ
(ಮತ್ತಾಯ ೨೭:೧೫-೩೧; ೧೧-೧೪; ಮಾರ್ಕ ೧೫:೬-೨೦; ಲೂಕ ೨೩:೧೩-೨೫)

39ಹೀಗೆ ಪಿಲಾತನು ಹೊರಗಿದ್ದ ಯೆಹೂದ್ಯರ ಬಳಿಗೆ ಬಂದು,
"ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸುವುದಿಲ್ಲ. ಪಾಸ್ಕಹಬ್ಬದ ಸಂದರ್ಭದಲ್ಲಿ ಒಬ್ಬ ಸೆರೆಯಾಳನ್ನು ಬಿಡುಗಡೆ ಮಾಡುವ ಪದ್ಧತಿಯಿದೆಯಷ್ಟೆ? ಆದ್ದರಿಂದ ನೀವು ಬಯಸಿದರೆ ಯೆಹೂದ್ಯರ ಅರಸನನ್ನು ನಾನು ಬಿಡುಗಡೆ ಮಾಡುತ್ತೇನೆ,"
ಎಂದು ಹೇಳಿದನು.
40ಅದಕ್ಕೆ ಅವರು,
"ಬೇಡ, ಇವನು ಬೇಡ. ನಮಗೆ ಬರಬ್ಬನನ್ನು ಬಿಟ್ಟುಕೊಡು,"

ಎಂದು ಬೊಬ್ಬಿಟ್ಟರು. ಬರಬ್ಬನು ಒಬ್ಬ ದರೋಡೆಕೋರನಾಗಿದ್ದನು.





ಅಧ್ಯಾಯಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ