ಅಧ್ಯಾಯ 19



ಯೆಹೂದ್ಯರಿಗೆ ಹೆದರಿದ ಪಿಲಾತ
                                                                                                                                               
1ಅನಂತರ ಪಿಲಾತನು ಯೇಸುವನ್ನು ಅಲ್ಲಿಂದ ಕರೆದೊಯ್ದು ಕೊರಡೆಯಿಂದ ಹೊಡೆಸಿದನು. 2ಸೈನಿಕರು ಮುಳ್ಳಿನ ಕಿರೀಟವನ್ನು ಹೆಣೆದು ಅವರ ತಲೆಗೆ ಮುಡಿಸಿ, ಕೆನ್ನೇರಳೆ ಬಣ್ಣದ ಅಂಗಿಯನ್ನು ಅವರಿಗೆ ಉಡಿಸಿ, ಹತ್ತಿರ ಬಂದು,
3"ಯೆಹೂದ್ಯರ ಅರಸನೇ, ನಿನಗೆ ಶುಭವಾಗಲಿ,"
ಎಂದು ಜರೆಯುತ್ತಾ ಅವರ ಕೆನ್ನೆಗೆ ಹೊಡೆದರು.
4ಪಿಲಾತನು ಮತ್ತೆ ಹೊರಗೆ ಬಂದು ಯೆಹೂದ್ಯರನ್ನು ಕುರಿತು, "ನೋಡಿ, ನಾನು ಅವನನ್ನು ನಿಮ್ಮ ಮುಂದೆ ತರುತ್ತಿದ್ದೇನೆ. ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸುತ್ತಿಲ್ಲ ಎಂಬುದು ನಿಮಗೆ ತಿಳಿದಿರಲಿ,"
ಎಂದು ಹೇಳಿದನು.
5ಆಗ ಯೇಸು ಮುಳ್ಳಿನ ಕಿರೀಟವನ್ನೂ ಕೆನ್ನೇರಳೆ ಬಣ್ಣದ ಅಂಗಿಯನ್ನೂ ಧರಿಸಿದವರಾಗಿ ಹೊರಕ್ಕೆ ಬಂದರು. ಪಿಲಾತನು,
"ಇದೋ ಈ ಮನುಷ್ಯನು!"
ಎಂದನು.
6ಮುಖ್ಯಯಾಜಕರೂ ಕಾವಲಾಳುಗಳೂ ಯೇಸುವನ್ನು ಕಂಡೊಡನೆ,
"ಇವನನ್ನು ಶಿಲುಬೆಗೇರಿಸಿ, ಶಿಲುಬೆಗೇರಿಸಿ" ಎಂದು ಅಬ್ಬರಿಸಿದರು. ಆಗ ಪಿಲಾತನು,
"ಬೇಕಾದರೆ ನೀವೇ ಇವನನ್ನು ಕರೆದುಕೊಂಡು ಹೋಗಿ ಶಿಲುಬೆಗೇರಿಸಿರಿ. ಆದರೆ ನನಗೆ ಇವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ,"
ಎಂದನು.
7ಅದಕ್ಕೆ ಯೆಹೂದ್ಯರು,
"ನಮಗೊಂದು ನಿಯಮವುಂಟು. ಅದರ ಮೇರೆಗೆ ಇವನು ಸಾಯಲೇಬೇಕು. ಏಕೆಂದರೆ, ತಾನು ದೇವರ ಪುತ್ರನೆಂದು ಹೇಳಿಕೊಂಡಿದ್ದಾನೆ,"
ಎಂದು ಉತ್ತರ ಕೊಟ್ಟರು.
8ಇದನ್ನು ಕೇಳಿದ್ದೇ ಪಿಲಾತನಿಗೆ ಮತ್ತಷ್ಟು ಭಯವಾಯಿತು. 9ಅವನು ಮತ್ತೆ ಅರಮನೆಯೊಳಕ್ಕೆ ಬಂದು,
"ನೀನು ಎಲ್ಲಿಂದ ಬಂದವನು?" ಎಂದು ಯೇಸುವನ್ನು ಕೇಳಿದನು. ಆದರೆ ಯೇಸು ಉತ್ತರಕೊಡಲಿಲ್ಲ.
10ಆಗ ಪಿಲಾತನು,
"ನನ್ನೊಡನೆ ನೀನು ಮಾತನಾಡುವುದಿಲ್ಲವೇ? ನಿನ್ನನ್ನು ಬಿಡುಗಡೆ ಮಾಡುವುದಕ್ಕೂ ಶಿಲುಬೆಗೇರಿಸುವುದಕ್ಕೂ ನನಗೆ ಅಧಿಕಾರವಿದೆಯೆಂದು ನಿನಗೆ ತಿಳಿಯದೇ?"
ಎಂದನು.
11ಅದಕ್ಕೆ ಯೇಸು,
"ನಿಮಗೆ ಮೇಲಿನಿಂದ ಕೊಟ್ಟ ಹೊರತು ಯಾವ ಅಧಿಕಾರವೂ ನನ್ನ ಮೇಲೆ ಇರುವುದಿಲ್ಲ. ಆದುದರಿಂದ ನನ್ನನ್ನು ನಿನ್ನ ಕೈಗೊಪ್ಪಿಸಿದವನಿಗೆ ಹೆಚ್ಚು ಪಾಪ," 
ಎಂದು ನುಡಿದರು.
12ಇದನ್ನು ಕೇಳಿದ ಮೇಲೆ ಪಿಲಾತನು ಯೇಸುವನ್ನು ಬಿಡುಗಡೆ ಮಾಡಲು ಪ್ರಯತ್ನಿಸಿದನು.
ಆದರೆ ಯೆಹೂದ್ಯರು,
"ಇವನನ್ನು ಬಿಡುಗಡೆ ಮಾಡಿದರೆ, ನೀವು ರೋಂ ಚಕ್ರವರ್ತಿಯ ಮಿತ್ರರಲ್ಲ; ತಾನೇ ಅರಸನೆಂದು ಹೇಳಿಕೊಳ್ಳುವ ಇವನು ರೋಂ ಚಕ್ರವರ್ತಿಯ ಶತ್ರು,"
ಎಂದು ಅಬ್ಬರಿಸಿದರು. 13ಅವರ ಅಬ್ಬರವನ್ನು ಕೇಳಿ ಪಿಲಾತನು ಯೇಸುವನ್ನು ಹೊರಕ್ಕೆ ಕರೆಸಿದನು. 'ಹಾಸುಗಲ್ಲು' ಎಂಬ ಕಟ್ಟೆಯ ಮೇಲಿದ್ದ ನ್ಯಾಯಪೀಠದ ಮೇಲೆ ಕುಳಿತುಕೊಂಡನು. ಯೆಹೂದ್ಯರ ಭಾಷೆಯಲ್ಲಿ ಆ ಸ್ಥಳಕ್ಕೆ 'ಗಬ್ಬಥ' ಎಂದು ಹೆಸರು. 14ಅಂದು ಹಬ್ಬದ ಹಿಂದಿನ ದಿನ. ಹನ್ನೆರಡು ಗಂಟೆ ಇರಬಹುದು. ಪಿಲಾತನು ಯೆಹೂದ್ಯರನ್ನು ನೋಡಿ,                                                                                                                                                                                                                       
"ಇದೋ ನಿಮ್ಮ ಅರಸನು,"
ಎಂದು ಹೇಳಿದನು.
15ಆದರೆ ಅವರು,
"ಕೊಲ್ಲಿರಿ, ಕೊಲ್ಲಿರಿ; ಶಿಲುಬೆಗೇರಿಸಿ,"
ಎಂದು ಕಿರುಚಿದರು.
ಪಿಲಾತನು,
"ನಿಮ್ಮ ಅರಸನನ್ನು ಶಿಲುಬೆಗೇರಿಸಲೇ?"
ಎಂದನು.
ಅದಕ್ಕೆ ಮುಖ್ಯಯಾಜಕರು,
"ರೋಂ ಚಕ್ರವರ್ತಿಯ ಹೊರತು ನಮಗೆ ಬೇರೆ ಅರಸನಿಲ್ಲ,"
ಎಂದು ಉತ್ತರಕೊಟ್ಟರು.
16ಕಡೆಗೆ ಪಿಲಾತನು ಯೇಸುವನ್ನು ಶಿಲುಬೆಗೇರಿಸುವುದಕ್ಕಾಗಿ ಅವರಿಗೆ ಒಪ್ಪಿಸಿಬಿಟ್ಟನು. ಅವರು ಯೇಸುವನ್ನು ತಮ್ಮ ವಶಕ್ಕೆ ಪಡೆದುಕೊಂಡರು.
ಶಿಲುಬೆಯ ಮೇಲೆ ಯೇಸು
(ಮತ್ತಾಯ ೨೭:೩೨-೪೪; ಮಾರ್ಕ ೧೫:೨೧-೩೨; ಲೂಕ ೨೩:೨೬-೪೩)

17ಯೇಸು ತಮ್ಮ ಶಿಲುಬೆಯನ್ನು ತಾವೇ ಹೊತ್ತುಕೊಂಡು 'ಕಪಾಲ' ಎಂಬ ಸ್ಥಳಕ್ಕೆ ಹೋದರು. ಯೆಹೂದ್ಯರ ಭಾಷೆಯಲ್ಲಿ ಇದನ್ನು 'ಗೊಲ್ಗೊಥ' ಎನ್ನುವರು. 18ಅಲ್ಲಿ ಯೇಸುವನ್ನು ಶಿಲುಬೆಗೇರಿಸಲಾಯಿತು. ಅವರ ಅಕ್ಕಪಕ್ಕದಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿಸಿದರು. 19ಪಿಲಾತನು ಒಂದು ಫಲಕದ ಮೇಲೆ, 'ಯೆಹೂದ್ಯರ ಅರಸ ನಜರೇತಿನ ಯೇಸು' ಎಂದು ಬರೆಸಿ ಶಿಲುಬೆಯ ಮೇಲಭಾಗದಲ್ಲಿ ಇರಿಸಿದನು. 20ಯೇಸುವನ್ನು ಶಿಲುಬೆಗೆ ಏರಿಸಿದ ಸ್ಥಳವು ನಗರಕ್ಕೆ ಸಮೀಪದಲ್ಲೇ ಇದ್ದುದರಿಂದ ಹಲವು ಮಂದಿ ಯೆಹೂದ್ಯರು ಆ ಫಲಕವನ್ನು ಓದಿದರು. ಅದನ್ನು ಇಬ್ರೀಯ, ಲತೀನ್‌ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆಯಲಾಗಿತ್ತು.
21ಆದುದರಿಂದ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ:
"ಯೆಹೂದ್ಯರ ಅರಸ ಎಂದು ಬರೆಯುವುದು ಬೇಡ, ತಾನು 'ಯೆಹೂದ್ಯರ ಅರಸನೆಂದು ಹೇಳಿಕೊಂಡವನು ಎಂದು ಬರೆಯಿರಿ,"
ಎಂದರು.
22ಅದಕ್ಕೆ ಪಿಲಾತನು,
"ನಾನು ಬರೆದುದು ಬರೆದಾಯಿತು,"
ಎಂದನು.
23ಯೇಸುವನ್ನು ಶಿಲುಬೆಗೇರಿಸಿದ ಬಳಿಕ ಸೈನಿಕರು ಯೇಸುವಿನ ಬಟ್ಟೆಗಳನ್ನು ತೆಗೆದುಕೊಂಡು ಒಬ್ಬೊಬ್ಬರಿಗೆ ಒಂದೊಂದು ಪಾಲಿನಂತೆ ನಾಲ್ಕು ಪಾಲು ಮಾಡಿ ಹಂಚಿಕೊಂಡರು. ಆದರೆ ಅವರ ಒಳಅಂಗಿಯು ಹೊಲಿಗೆಯಿಲ್ಲದೆ ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು. 24ಅದನ್ನು ತೆಗೆದುಕೊಂಡು ಅವರು ತಮ್ಮತಮ್ಮೊಳಗೆ,
"ಇದನ್ನು ಹರಿಯುವುದು ಬೇಡ. ಚೀಟಿ ಹಾಕಿ ಯಾರ ಪಾಲಿಗೆ ಬರುವುದೋ ನೋಡೋಣ,"
ಎಂದು ಮಾತನಾಡಿಕೊಂಡು ಹಾಗೆಯೇ ಮಾಡಿದರು. ಹೀಗೆ,
"ಹಂಚಿಕೊಂಡರೆನ್ನ ಬಟ್ಟೆಗಳನ್ನು
ಚೀಟು ಹಾಕಿದರೆನ್ನ ಅಂಗಿಯನ್ನು
ತಮ್ಮಲ್ಲವರು,"
ಎಂಬ ಪವಿತ್ರಗ್ರಂಥದ ವಾಕ್ಯ ನೆರವೇರಿತು.
25ಯೇಸುವಿನ ತಾಯಿ, ತಾಯಿಯ ಸಹೋದರಿ, ಕ್ಲೆಯೋಪನ ಹೆಂಡತಿ ಮರಿಯ ಮತ್ತು ಮಗ್ದಲದ ಮರಿಯ-ಇವರು ಶಿಲುಬೆಯ ಬಳಿಯಲ್ಲಿ ನಿಂತಿದ್ದರು. 26ಯೇಸು ತಮ್ಮ ತಾಯನ್ನೂ ಆಕೆಯ ಮಗ್ಗುಲಲ್ಲಿ ನಿಂತ ಆಪ್ತಶಿಷ್ಯನನ್ನೂ ನೋಡಿ,
"ಅಮ್ಮಾ, ಇದೋ ನಿನ್ನ ಮಗನು,"
ಎಂದರು.
27ಅನಂತರ ತಮ್ಮ ಶಿಷ್ಯನನ್ನು ಕುರಿತು,
"ಇದೋ ನಿನ್ನ ತಾಯಿ,"
ಎಂದರು. ಅಂದಿನಿಂದ ಆ ಶಿಷ್ಯನು ಆಕೆಯನ್ನು ತನ್ನ ಮನೆಯಲ್ಲೇ ಇರಿಸಿಕೊಂಡನು.

ಯೇಸುವಿನ ಮರಣ
(ಮತ್ತಾಯ ೨೭:೪೫-೫೬; ಮಾರ್ಕ ೧೫:೩೩-೪೧; ಲೂಕ ೨೩:೪೪-೪೯)

28ಇದಾದ ಬಳಿಕ ಯೇಸು ನೆರವೇರಬೇಕಾದುದೆಲ್ಲವೂ ನೆರವೇರಿದೆ ಎಂದು ತಿಳಿದು ಪವಿತ್ರಗ್ರಂಥದಲ್ಲಿ ಬರೆದಿರುವುದು ಈಡೇರುವಂತೆ,
"ನನಗೆ ದಾಹವಾಗಿದೆ,"
ಎಂದು ನುಡಿದರು. 29ಬಳಿಯಲ್ಲೇ ಹುಳಿರಸ ತುಂಬಿದ ಪಾತ್ರೆಯೊಂದಿತ್ತು. ಅವರು ಸ್ಪಂಜನ್ನು ಆ ಹುಳಿರಸದಲ್ಲಿ ತೋಯಿಸಿ ಹಿಸೋಪ ಗಿಡದ ಕೋಲಿಗೆ ಸಿಕ್ಕಿಸಿ, ಯೇಸುವಿನ ಬಾಯಿಗೆ ಮುಟ್ಟಿಸಿದರು.
30ಯೇಸು ಆ ಹುಳಿರಸವನ್ನು ಸೇವಿಸುತ್ತಲೇ,"
"ಎಲ್ಲಾ ನೆರವೇರಿತು,"
ಎಂದು ನುಡಿದು ತಲೆಬಾಗಿ ತಮ್ಮ ಆತ್ಮವನ್ನು ಒಪ್ಪಿಸಿದರು.

ತಾವು ಇರಿದವನನ್ನೇ ನಿರೀಕ್ಷಿಸುವರು

31ಅಂದು ಪಾಸ್ಕಹಬ್ಬದ ಹಿಂದಿನ ದಿನ. ಮಾರನೆಯ ದಿನ ಸಬ್ಬತ್‌ದಿನವೂ ದೊಡ್ಡಹಬ್ಬವೂ ಆಗಿತ್ತು. ಸಬ್ಬತ್‌ದಿನದಂದು ಶವಗಳು ಶಿಲುಬೆಯ ಮೇಲೆ ತೂಗಾಡುವುದು ಸರಿಯಲ್ಲವೆಂದು ಶಿಲುಬೆಗೇರಿಸಲಾಗಿದ್ದವರ ಕಾಲುಗಳನ್ನು ಮುರಿದು ಅವರ ಶವವನ್ನು ಅಂದೇ ತೆಗೆಯಿಸಿಬಿಡಲು ಯೆಹೂದ್ಯರು ಪಿಲಾತನಿಂದ ಅಪ್ಪಣೆ ಕೇಳಿಕೊಂಡರು. 32ಅಂತೆಯೇ ಸೈನಿಕರು ಬಂದು ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಮೊದಲನೆಯವನ ಮತ್ತು ಎರಡನೆಯವನ ಕಾಲುಗಳನ್ನು ಮುರಿದರು. 33ತರುವಾಯ ಯೇಸುವಿನ ಬಳಿಗೆ ಬಂದರು. ಯೇಸು ಆಗಲೇ ಸತ್ತು ಹೋಗಿರುವುದನ್ನು ಕಂಡು, ಅವರ ಕಾಲುಗಳನ್ನು ಮುರಿಯಲಿಲ್ಲ. 34ಆದರೂ ಸೈನಿಕರಲ್ಲಿ ಒಬ್ಬನು ಈಟಿಯಿಂದ ಅವರ ಪಕ್ಕೆಯನ್ನು ತಿವಿದನು. ಕೂಡಲೇ ರಕ್ತವೂ ನೀರೂ ಅಲ್ಲಿಂದ ಹೊರಗೆ ಹರಿದುಬಂದವು. 35ಇದು ಕಣ್ಣಾರೆ ಕಂಡವನ ಹೇಳಿಕೆ. ಈ ಹೇಳಿಕೆ ಸತ್ಯವಾದುದು; ತಾನು ಸತ್ಯವನ್ನೇ ನುಡಿಯುತ್ತಿದ್ದೇನೆಂಬ ಅರಿವು ಆತನಿಗಿದೆ. ನೀವು ವಿಶ್ವಾಸಿಸಬೇಕೆಂದೇ ಆತನು ಇದನ್ನು ಹೇಳಿದ್ದಾನೆ.
36'ಆತನ ಎಲುಬೊಂದನ್ನೂ ಮುರಿಯಕೂಡದು' ಎಂದು ಪವಿತ್ರಗ್ರಂಥದಲ್ಲಿ ಬರೆದಿದೆ. ಆ ವಾಕ್ಯ ನೆರವೇರುವಂತೆ ಹೀಗೆ ನಡೆಯಿತು.  37'ತಾವು ಇರಿದವನನ್ನೇ ಅವರು ನಿರೀಕ್ಷಿಸುವರು' ಎನ್ನುತ್ತದೆ ಇನ್ನೊಂದು ವಾಕ್ಯ.
                                                                                               
ಶವಸಂಸ್ಕಾರ
(ಮತ್ತಾಯ ೨೭:೫೭-೬೧; ಮಾರ್ಕ ೧೫:೪೨-೪೭; ಲೂಕ ೨೩:೫೦-೫೬)


38ಅರಿಮತಾಯ ಊರಿನ ಜೋಸೆಫ್‌ ಎಂಬುವವನು ಕೂಡ ಯೇಸುವಿನ ಶಿಷ್ಯರಲ್ಲಿ ಒಬ್ಬನು. ಈತನು ಯೆಹೂದ್ಯರಿಗೆ ಹೆದರಿ ತಾನು ಶಿಷ್ಯನೆಂದು ತೋರಿಸಿಕೊಳ್ಳುತ್ತಿರಲಿಲ್ಲ. ಮೇಲೆ ಹೇಳಿದ್ದೆಲ್ಲವೂ ನಡೆದಾದ ಮೇಲೆ ಈತನು ಯೇಸುವಿನ ಪಾರ್ಥೀವ ಶರೀರವನ್ನು ಕೊಂಡೊಯ್ಯಲು ಪಿಲಾತನಿಂದ ಅಪ್ಪಣೆ ಕೇಳಿದನು. ಪಿಲಾತನಿಂದ ಒಪ್ಪಿಗೆಯನ್ನು ಪಡೆದು ಈತನು ಬಂದು ಪಾರ್ಥೀವ ಶರೀರವನ್ನು ಕೊಂಡೊಯ್ದನು. 39ಈತನು ಮಾತ್ರವಲ್ಲ, ಹಿಂದೊಮ್ಮೆ ರಾತ್ರಿಯಲ್ಲಿ ಯೇಸುವನ್ನು ನೋಡಲು ಬಂದಿದ್ದ ನಿಕೊದೇಮನೂ ಕೂಡ ಅಲ್ಲಿಗೆ ಬಂದಿದ್ದನು. ಇವನು ರಕ್ತಬೋಳ ಹಾಗೂ ಅಗರು ಕಲಸಿದ ಮೂವತ್ತು ಕಿಲೋಗ್ರಾಮಿನಷ್ಟು ಚೂರ್ಣವನ್ನು ತಂದಿದ್ದನು. 40ಇವರು ಯೇಸುವಿನ ಪಾರ್ಥೀವ ಶರೀರವನ್ನು ತೆಗೆದು ಯೆಹೂದ್ಯರ ಶವಸಂಸ್ಕಾರದ ಪದ್ಧತಿಯಂತೆ ಸುಗಂಧದ್ರವ್ಯಗಳನ್ನು ಹಾಕಿ ನಾರುಬಟ್ಟೆಯಲ್ಲಿ ಸುತ್ತಿದರು. 41ಯೇಸುವನ್ನು ಶಿಲುಬೆಗೇರಿಸಿದ ಸ್ಥಳದಲ್ಲಿ ಒಂದು ತೋಟವಿತ್ತು. ಆ ತೋಟದಲ್ಲಿ ಅದುವರೆಗೆ ಯಾರ ಶವವನ್ನೂ ಇಡದಂತಹ ಹೊಸ ಸಮಾಧಿಯಿತ್ತು. 42ಸಮಾಧಿಯು ಹತ್ತಿರದಲ್ಲೇ ಇದ್ದುದರಿಂದ ಹಾಗೂ ಮರುದಿನ ಪಾಸ್ಕಹಬ್ಬವಾದುದರಿಂದ ಯೇಸುವಿನ ಪಾರ್ಥೀವ ಶರೀರವನ್ನು ಅದರಲ್ಲೇ ಸಮಾಧಿ ಮಾಡಿದರು.




ಅಧ್ಯಾಯಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ