ಬರಿದಾಗಿದ್ದ ಸಮಾಧಿ
(ಮತ್ತಾಯ
೨೮:೧-೮; ಮಾರ್ಕ ೧೬:೧-೮; ಲೂಕ ೨೪:೧-೧೨)
1ಅಂದು
ಭಾನುವಾರ, ಮುಂಜಾನೆ. ಇನ್ನೂ ಕತ್ತಲಾಗಿತ್ತು. ಮಗ್ದಲದ ಮರಿಯಳು ಸಮಾಧಿಯ ಬಳಿಗೆ ಬಂದಳು. ಸಮಾಧಿಯ ಬಾಗಿಲಿಗೆ
ಮುಚ್ಚಲಾಗಿದ್ದ ಕಲ್ಲು ಅಲ್ಲಿಂದ ತೆಗೆದುಹಾಕಿರುವುದನ್ನು ಆಕೆ ಕಂಡಳು. 2ಆಗ ಆಕೆಯು ಸಿಮೋನ ಪೇತ್ರನ ಮತ್ತು ಯೇಸುವಿಗೆ ಆಪ್ತನಾಗಿದ್ದ ಇನ್ನೊಬ್ಬ
ಶಿಷ್ಯನ ಬಳಿಗೆ ಓಡಿಬಂದು,
"ಪ್ರಭುವನ್ನು ಸಮಾಧಿಯೊಳಗಿನಿಂದ ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ;
ಅವರನ್ನು ಎಲ್ಲಿ ಇಟ್ಟಿದ್ದಾರೋ ಗೊತ್ತಿಲ್ಲ,"
ಎಂದು ಹೇಳಿದಳು. 3ಇದನ್ನು ಕೇಳಿ ಪೇತ್ರನೂ ಇನ್ನೊಬ್ಬ ಶಿಷ್ಯನೂ ಸಮಾಧಿಯ ಕಡೆಗೆ ಹೊರಟರು.
4ಇಬ್ಬರೂ ಓಡಿದರು. ಆ ಇನ್ನೊಬ್ಬ ಶಿಷ್ಯನು ಪೇತ್ರನಿಗಿಂತ
ಮುಂದೆ ಓಡಿ ಸಮಾಧಿಯನ್ನು ಮೊದಲು ತಲುಪಿದನು. 5ಅವನು ಬಗ್ಗಿ ನೋಡಿದಾಗ ಅಲ್ಲಿ
ನಾರು ಬಟ್ಟೆಗಳು ಬಿದ್ದಿರುವುದು ಕಾಣಿಸಿತು. ಆದರೆ ಅವನು ಒಳಗೆ ನುಗ್ಗಲಿಲ್ಲ. 6ಅವನ ಹಿಂದೆಯೇ ಸಿಮೋನ ಪೇತ್ರನು ಬಂದು ನೆಟ್ಟಗೆ ಸಮಾಧಿಯೊಳಕ್ಕೆ ನುಗ್ಗಿದನು;
ಅಲ್ಲಿ ನಾರು ಬಟ್ಟೆಗಳು ಬಿದ್ದಿರುವುದನ್ನು ಕಂಡನು. 7ಯೇಸುವಿನ
ತಲೆಗೆ ಸುತ್ತಿದ್ದ ಬಟ್ಟೆಯು, ಆ ನಾರು ಬಟ್ಟೆಗಳೊಡನೆ ಇರದೆ ಅದನ್ನು ಮಡಚಿ ಪ್ರತ್ಯೇಕವಾಗಿ ಇಟ್ಟಿರುವುದನ್ನು
ಕಂಡನು. 8ಸಮಾಧಿಯನ್ನು ಮೊದಲು ತಲುಪಿದ್ದ
ಇನ್ನೊಬ್ಬ ಶಿಷ್ಯನು ಆಮೇಲೆ ಒಳಗೆ ನುಗ್ಗಿ ನೋಡಿದನು; ನೋಡಿ ನಂಬಿದನು. 9ಯೇಸು ಸತ್ತ ಮೇಲೆ ಮರಳಿ ಜೀವಂತರಾಗಿ ಎದ್ದು ಬರಬೇಕು ಎಂಬ ಪವಿತ್ರಗ್ರಂಥದ ವಾಕ್ಯವು ಅವರಿಗೆ ಅದುವರೆಗೂ
ಅರ್ಥವಾಗಿರಲಿಲ್ಲ. 10ತರುವಾಯ ಆ ಶಿಷ್ಯರು ತಮ್ಮ ಮನೆಗಳಿಗೆ
ಹಿಂದಿರುಗಿದರು.
ಮರಿಯಳಿಗೆ ದರ್ಶನ
11-12ಮರಿಯಳು
ಅಳುತ್ತಾ ಸಮಾಧಿಯ ಹೊರಗೆ ನಿಂತುಕೊಂಡಿದ್ದಳು. ಆಕೆ ಅಳುತ್ತಾ ಸಮಾಧಿಯೊಳಗೆ ಬಗ್ಗಿ ನೋಡಿದಾಗ ಶ್ವೇತವಸ್ತ್ರಧಾರಿಗಳಾದ
ಇಬ್ಬರು ದೇವದೂತರನ್ನು ಅಲ್ಲಿ ಕಂಡಳು. ಯೇಸುವಿನ ಪಾರ್ಥೀವ ಶರೀರವನ್ನು ಇಟ್ಟಿದ್ದ ಸ್ಥಳದಲ್ಲಿ, ಒಬ್ಬನು
ಅವರ ತಲೆ ಇದ್ದ ಕಡೆಯಲ್ಲೂ ಮತ್ತೊಬ್ಬನು ಕಾಲು ಇದ್ದ ಕಡೆಯಲ್ಲೂ ಕುಳಿತಿದ್ದರು.
13ಅವರು
ಆಕೆಯನ್ನು,
"ಏಕಮ್ಮಾ ಅಳುತ್ತಿರುವೆ?"
ಎಂದು ಕೇಳಿದರು.
"ನನ್ನ ಪ್ರಭುವನ್ನು ತೆಗೆದುಕೊಂಡು ಹೋಗಿಬಿಟ್ಟಿದ್ದಾರೆ.
ಎಲ್ಲಿ ಇಟ್ಟಿದ್ದಾರೋ ತಿಳಿಯದು,"
ಎಂದಳು. 14ಹಾಗೆ
ಹೇಳಿ ಹಿಂದಕ್ಕೆ ತಿರುಗಿದಾಗ ಅಲ್ಲೇ ಯೇಸು ನಿಂತಿರುವುದು ಆಕೆಗೆ ಕಾಣಿಸಿತು. ಆದರೆ ಅವರೇ ಯೇಸುವೆಂದು
ಆಕೆಗೆ ತಿಳಿಯಲಿಲ್ಲ.
15ಯೇಸು,
"ಏಕಮ್ಮಾ ಅಳುತ್ತಿರುವೆ? ಏನನ್ನು ಹುಡುಕುತ್ತಿರುವೆ?"
ಎಂದು ಕೇಳಿದಾಗಲೂ ಮರಿಯಳು ಅವರನ್ನು ತೋಟಗಾರನೆಂದು ಭಾವಿಸಿ,
"ಅಯ್ಯಾ, ನೀವೇನಾದರೂ ಅವರನ್ನು ತೆಗೆದುಕೊಂಡು ಹೋಗಿದ್ದರೆ
ಎಲ್ಲಿ ಇಟ್ಟಿರುವಿರೆಂದು ಹೇಳಿ, ನಾನು ತೆಗೆದುಕೊಂಡು ಹೋಗುತ್ತೇನೆ,"
ಎಂದು ಹೇಳಿದಳು.
16ಆಗ
ಯೇಸು,
"ಮರಿಯಾ"
ಎಂದು ಹೆಸರನ್ನು ಹಿಡಿದು ಕರೆದರು. ಆಕೆ ಹಿಂದಿರುಗಿ ನೋಡಿ,
"ರಬ್ಬೂನಿ"
ಎಂದಳು. (ಯೆಹೂದ್ಯರ ಭಾಷೆಯಲ್ಲಿ 'ರಬ್ಬೂನಿ' ಎಂದರೆ 'ಗುರುದೇವ'
ಎಂದರ್ಥ).
17ಯೇಸು
ಆಕೆಗೆ,
"ನನ್ನನ್ನು ಹಿಡಿದುಕೊಂಡಿರಬೇಡ, ನಾನಿನ್ನೂ ಪಿತನ
ಬಳಿಗೆ ಏರಿಹೋಗಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ, ನನ್ನ ಪಿತನೂ ನಿಮ್ಮ ಪಿತನೂ, ನನ್ನ ದೇವರೂ
ನಿಮ್ಮ ದೇವರೂ ಆಗಿರುವಾತನಲ್ಲಿಗೆ ನಾನು ಏರಿ ಹೋಗುತ್ತೇನೆಂದು ತಿಳಿಸು," ಎಂದು ಹೇಳಿದರು.
18ಮಗ್ದಲದ
ಮರಿಯಳು ಶಿಷ್ಯರ ಬಳಿಗೆ ಬಂದು,
"ನಾನು ಪ್ರಭುವನ್ನು ಕಂಡೆ. ಅವರು ಹೀಗೆ ಹೇಳಿದರು,"
ಎಂದು ಅವರು ತಿಳಿಸಿದ್ದನ್ನು ಹೇಳಿದಳು.
ಶಿಷ್ಯರಿಗೆ ದರ್ಶನ
(ಮತ್ತಾಯ
೨೮:೧೬-೨೦; ಮಾರ್ಕ ೧೬:೧೪-೧೮; ಲೂಕ ೨೪:೩೬-೪೯)
19ಅದೇ
ಭಾನುವಾರ ಸಂಜೆ ಶಿಷ್ಯರು ಒಂದು ಮನೆಯಲ್ಲಿ ಸೇರಿದ್ದರು. ಯೆಹೂದ್ಯರಿಗೆ ಅಂಜಿ ಅವರು ಬಾಗಿಲುಗಳನ್ನು
ಮುಚ್ಚಿ ಒಳಗೆ ಇದ್ದರು. ಆಗ ಯೇಸು ಬಂದು ಅವರ ನಡುವೆ ನಿಂತರು.
20"ನಿಮಗೆ
ಶಾಂತಿ,"
ಎಂದು ಹೇಳಿ ತಮ್ಮ ಕೈಗಳನ್ನು ಮತ್ತು ಪಕ್ಕೆಗಳನ್ನು ತೋರಿಸಿದರು.
ಪ್ರಭುವನ್ನು ಕಂಡು ಶಿಷ್ಯರಿಗೆ ಪರಮಾನಂದವಾಯಿತು.
21ಯೇಸು
ಪುನಃ,
"ನಿಮಗೆ ಶಾಂತಿ, ಪಿತನು ನನ್ನನ್ನು ಕಳುಹಿಸಿದಂತೆಯೇ
ನಾನೂ ನಿಮ್ಮನ್ನು ಕಳುಹಿಸುತ್ತೇನೆ"
ಎಂದರು. 22ಅನಂತರ
ಅವರ ಮೇಲೆ ಉಸಿರನ್ನು ಊದಿ,
"ಪವಿತ್ರಾತ್ಮರನ್ನು ಸ್ವೀಕರಿಸಿರಿ. 23ಯಾರ ಪಾಪಗಳನ್ನು ನೀವು ಕ್ಷಮಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸಲಾಗುವುದು.
ಯಾರ ಪಾಪಗಳನ್ನು ನೀವು ಕ್ಷಮಿಸದೆ ಉಳಿಸುತ್ತೀರೋ, ಅವರ ಪಾಪಗಳನ್ನು ಕ್ಷಮಿಸದೆ ಉಳಿಸಲಾಗುವುದು,"
ಎಂದು ನುಡಿದರು.
ತೋಮನಿಗೆ ದರ್ಶನ
24ಹನ್ನೆರಡು
ಮಂದಿ ಶಿಷ್ಯರಲ್ಲಿ ಒಬ್ಬನಾದ 'ದಿದುಮ' ಎಂಬ ತೋಮನು, ಯೇಸು ಬಂದ ಸಮಯದಲ್ಲಿ ಶಿಷ್ಯರೊಡನೆ ಇರಲಿಲ್ಲ.
25ಉಳಿದ
ಶಿಷ್ಯರು,
"ನಾವು ಪ್ರಭುವನ್ನು ನೋಡಿದೆವು,"
ಎಂದು ಹೇಳಿದರು. ಅದಕ್ಕೆ ಅವನು,
"ಅವರ ಕೈಗಳಲ್ಲಿ ಮೊಳೆಗಳಿಂದಾದ ಗಾಯದ ಕಲೆಯನ್ನು ನೋಡಬೇಕು,
ಅದರ ಹೊರತು ನಾನು ನಂಬುವುದೇ ಇಲ್ಲ,"
ಎಂದು ಹೇಳಿದನು.
26ಎಂಟು
ದಿನಗಳು ಕಳೆದವು. ಶಿಷ್ಯರು ಪುನಃ ಒಳಗೆ ಒಟ್ಟಾಗಿ ಸೇರಿದ್ದರು. ತೋಮನೂ ಅವರೊಡನೆ ಇದ್ದನು. ಬಾಗಿಲುಗಳು
ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು,
"ನಿಮಗೆ ಶಾಂತಿ"
ಎಂದರು.
27ಆಮೇಲೆ
ತೋಮನಿಗೆ,
"ಇದೋ ನೋಡು, ನನ್ನ ಕೈಗಳು; ನಿನ್ನ ಬೆರಳನ್ನು ತಂದು
ಇಲ್ಲಿಡು. ನಿನ್ನ ಕೈಯನ್ನು ಚಾಚಿ ನನ್ನ ಪಕ್ಕೆಯಲ್ಲಿಡು. ವಿಶ್ವಾಸರಹಿತನಾಗಿರಬೇಡ, ವಿಶ್ವಾಸಿಸು,"
ಎಂದು ಹೇಳಿದರು.
28ಆಗ
ತೋಮನು,
"ನನ್ನ ಪ್ರಭುವೇ, ನನ್ನ ದೇವರೇ,"
ಎಂದನು.
29ಯೇಸು
ಅವನಿಗೆ,
"ನನ್ನನ್ನು ಕಂಡ ಮೇಲೆ ತಾನೇ ನಿನಗೆ ವಿಶ್ವಾಸ ಹುಟ್ಟಿದ್ದು?
ಕಾಣದೇ ವಿಶ್ವಾಸಿಸುವವರು ಧನ್ಯರು,"
ಎಂದು ಹೇಳಿದರು.
ಉಪಸಂಹಾರ
30ಯೇಸು
ತಮ್ಮ ಶಿಷ್ಯರ ಕಣ್ಣ ಮುಂದೆ ಮಾಡಿದ ಸೂಚಕಕಾರ್ಯಗಳು ಇನ್ನೂ ಎಷ್ಟೋ ಇವೆ. ಅವುಗಳನ್ನು ಈ ಪುಸ್ತಕದಲ್ಲಿ
ಬರೆಯಲಾಗಿಲ್ಲ. 31ಇಲ್ಲಿ ಬರೆದವುಗಳ ಉದ್ದೇಶ ಇಷ್ಟು.
ಯೇಸು, ದೇವರ ಪುತ್ರ ಹಾಗೂ ಲೋಕೋದ್ಧಾರಕ ಎಂದು ನೀವು ವಿಶ್ವಾಸಿಸಿಬೇಕು; ವಿಶ್ವಾಸಿಸಿ ಅವರ ಹೆಸರಿನಲ್ಲಿ
ಸಜ್ಜೀವವನ್ನು ಪಡೆಯಬೇಕು.
ಅಧ್ಯಾಯಗಳು

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ