ಅಧ್ಯಾಯ 7


ಯೇಸು ಮತ್ತು ಸೋದರರು

1ಇದಾದ ಬಳಿಕ ಯೇಸು ಗಲಿಲೇಯದಲ್ಲಿ ಸಂಚರಿಸತೊಡಗಿದರು. ಯೆಹೂದ್ಯರು ತಮ್ಮನ್ನು ಕೊಲ್ಲಲು ಹವಣಿಸುತ್ತಿದ್ದುದರಿಂದ ಜುದೇಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ. 2ಯೆಹೂದ್ಯರ ಪರ್ಣಕುಟೀರಗಳ ಹಬ್ಬವು ಸಮೀಪಿಸುತ್ತಿತ್ತು.
ಯೇಸುವಿನ ಸೋದರರು,
3"ನೀನು ಇಲ್ಲಿಂದ ಜುದೇಯಕ್ಕೆ ಹೋಗು. ಅಲ್ಲಿ ನೀನು ಮಾಡುವುದನ್ನೆಲ್ಲಾ ನಿನ್ನ ಅನುಯಾಯಿಗಳು ನೋಡಲಿ. 4ಪ್ರಖ್ಯಾತನಾಗಬೇಕೆಂದಿರುವ ಯಾರೂ ತನ್ನ ಕಾರ್ಯಗಳನ್ನು ಮರೆಯಲ್ಲಿ ಮಾಡುವುದಿಲ್ಲ. ಇವನ್ನೆಲ್ಲಾ ನೀನು ಮಾಡುವುದಾದರೆ ಲೋಕಕ್ಕೆ ಪ್ರಕಟವಾಗುವಂತೆ ಮಾಡಬೇಕು,"
ಎಂದು ಯೇಸುವಿಗೆ ಹೇಳಿದರು. 5ಅವರ ಸೋದರರಿಗೆ ಕೂಡ ಅವರಲ್ಲಿ ವಿಶ್ವಾಸವಿರಲಿಲ್ಲ. 6ಅದಕ್ಕೆ ಯೇಸು,
"ನನಗಿನ್ನೂ ಸೂಕ್ತ ಸಮಯ ಬಂದಿಲ್ಲ. ನಿಮಗಾದರೆ ಎಲ್ಲಾ ಸಮಯವೂ ಒಂದೇ. 7ಲೋಕಕ್ಕೆ ನಿಮ್ಮ ಮೇಲೆ ಹಗೆಯಿಲ್ಲ. ಅದಕ್ಕೆ ಹಗೆಯಿರುವುದು ನನ್ನ ಮೇಲೆ. ಏಕೆಂದರೆ, ಅದರ ವರ್ತನೆ ಕೆಟ್ಟದ್ದೆಂದು ನಾನು ಯಥಾರ್ಥವಾಗಿ ಹೇಳುತ್ತಾ ಇದ್ದೇನೆ. 8ಹಬ್ಬಕ್ಕೆ ನೀವೇ ಹೋಗಿರಿ. ನನಗೆ ಸಮಯವು ಇನ್ನೂ ಬಂದಿಲ್ಲವಾದ ಕಾರಣ ನಾನು ಹಬ್ಬಕ್ಕೆ ಈಗ ಹೋಗುವುದಿಲ್ಲ,"
ಎಂದು ಹೇಳಿ 9ಯೇಸು ಗಲಿಲೇಯದಲ್ಲೇ ಉಳಿದುಕೊಂಡರು.

ತೀರ್ಪು ನ್ಯಾಯಬದ್ಧವಾಗಿರಬೇಕು
                                                                                                                                                                                                                                                                                                                                                                                                                                                                                                                       
10ಯೇಸುವಿನ ಸೋದರರು ಹಬ್ಬಕ್ಕೆ ಹೋದರು. ಯೇಸುವೂ ಅಲ್ಲಿಗೆ ಹೋದರು. ಬಹಿರಂಗವಾಗಿ ಅಲ್ಲ, ಗುಟ್ಟಾಗಿ. 11ಹಬ್ಬದ ಸಮಯದಲ್ಲಿ ಯೇಸು ಎಲ್ಲಿದ್ದಾರೆಂದು ಯೆಹೂದ್ಯರು ಹುಡುಕುತ್ತಿದ್ದರು. ಅವರನ್ನು ಕುರಿತು ಜನರ ಗುಂಪು ಗುಸುಗುಸು ಮಾತನಾಡುತ್ತಿತ್ತು.
12'ಆತ ಒಳ್ಳೆಯ ವ್ಯಕ್ತಿ,'
ಎಂದು ಕೆಲವರು ಹೇಳಿದರೆ,
'ಇಲ್ಲಾ, ಆತನು ಜನರನ್ನು ಅಡ್ಡದಾರಿಗೆ ಎಳೆಯುತ್ತಿದ್ದಾನೆ,'
ಎಂದು ಇತರರು ಹೇಳುತ್ತಿದ್ದರು. 13ಯೆಹೂದ್ಯರಿಗೆ ಹೆದರಿ ಅವರಾರೂ ಬಹಿರಂಗವಾಗಿ ಮಾತನಾಡುತ್ತಿರಲಿಲ್ಲ. 14ಹಬ್ಬವು ಅರ್ಧಕ್ಕರ್ಧ ಮುಗಿಯಿತು. ಆಗ ಯೇಸು ಮಹಾ ದೇವಾಲಯಕ್ಕೆ ಹೋಗಿ ಬೋಧನೆ ಮಾಡತೊಡಗಿದರು. 15ಅದನ್ನು ಕೇಳಿ ಯೆಹೂದ್ಯ ಅಧಿಕಾರಿಗಳು ಬೆರಗಾದರು.
"ಕಲಿಯದಿದ್ದರೂ ಈ ಮನುಷ್ಯನಿಗೆ ಇಷ್ಟೆಲ್ಲಾ ಪಾಂಡಿತ್ಯ ಎಲ್ಲಿಂದ ಬಂತು?"
ಎಂದು ವಿಚಾರಿಸತೊಡಗಿದರು.
16ಆಗ ಯೇಸು,
"ನಾನು ಮಾಡುವ ಬೋಧನೆ ನನ್ನದಲ್ಲ; ನನ್ನನ್ನು ಕಳುಹಿಸಿದಾತನದು. 17ದೇವರ ಚಿತ್ತದಂತೆ ನಡೆಯಲು ಮನಸ್ಸುಳ್ಳವನಿಗೆ ನಾನು ಬೋಧಿಸುವುದು ದೇವರಿಂದ ಬಂದುದೋ; ನನ್ನ ಸ್ವಂತ ಕಲ್ಪನೆಯೋ ಎಂಬುದು ತಿಳಿಯುತ್ತದೆ. 18ಸ್ವಂತ ಕಲ್ಪನೆಯಿಂದ ಮಾತನಾಡುವವನು ತನ್ನ ಸ್ವಪ್ರತಿಷ್ಟೆಯನ್ನು ಬಯಸುತ್ತಾನೆ. ತನ್ನನ್ನು ಕಳುಹಿಸದಾತನ ಪ್ರತಿಷ್ಟೆಯನ್ನು ಬಯಸುವವನು ಪ್ರಾಮಾಣಿಕನು. ಕಪಟವೆಂಬುದು ಅವನಲ್ಲಿ ಇರದು. 19ಮೋಶೆಯು ಕೊಟ್ಟ ಧರ್ಮಶಾಸ್ತ್ರವು ನಿಮ್ಮಲ್ಲಿದೆಯಲ್ಲವೇ? ಆದರೂ ಅದರ ಪ್ರಕಾರ ನಡೆಯುವವರಾರೂ ನಿಮ್ಮಲ್ಲಿ ಇಲ್ಲ. ನನ್ನನ್ನು ಕೊಲ್ಲಬೇಕೆಂದು ನೀವು ಹವಣಿಸುವುದೇಕೆ?" ಎಂದರು. 20ಅದಕ್ಕೆ ಆ ಜನರು, "ನಿನಗೆ ದೆವ್ವ ಹಿಡಿದಿರಬೇಕು; ನಿನ್ನನ್ನು ಕೊಲ್ಲಲು ಹವಣಿಸುತ್ತಿರುವವರಾದರೂ ಯಾರು?" ಎಂದರು. 21ಯೇಸು ಅವರಿಗೆ, "ಸಬ್ಬತ್‌ದಿನ ನಾನು ಮಾಡಿದ ಸೂಚಕಕಾರ್ಯ ಒಂದೇ ಒಂದು. ಅಷ್ಟಕ್ಕೆ ನೀವೆಲ್ಲರೂ ಕಂಗಾಲಾಗಿದ್ದೀರಿ. 22ಸುನ್ನತಿಯನ್ನು ಆಚರಿಸಬೇಕೆಂದು ನಿಯಮಿಸಿದವನು ಮೋಶೆ. (ವಾಸ್ತವವಾಗಿ ಅದು ಮೋಶೆಯ ಕಾಲದಿಂದಲ್ಲ, ಪೂರ್ವಜರ ಕಾಲದಿಂದಲೂ ರೂಢಿಯಲ್ಲಿತ್ತು). ಸಬ್ಬತ್‌ದಿನದಲ್ಲಿಯೂ ನೀವು ಸುನ್ನತಿಯನ್ನು ಮಾಡುವುದುಂಟು. 23ಮೋಶೆಯ ನಿಯಮವನ್ನು ಉಲ್ಲಂಘಿಸದೆ ನೀವು ಸಬ್ಬತ್‌ದಿನದಲ್ಲಿ ಒಬ್ಬನಿಗೆ ಸುನ್ನತಿ ಮಾಡಬಹುದಾದರೆ ಅದೇ ಸಬ್ಬತ್‌ದಿನದಲ್ಲಿ ನಾನೂ ಒಬ್ಬ ಮನುಷ್ಯನನ್ನು ಸಂಪುರ್ಣ ಸ್ವಸ್ಥಪಡಿಸಿದ್ದಕ್ಕೆ ನೀವು ಸಿಟ್ಟಾಗಬೇಕೆ? 24ಬರಿಯ ತೋರಿಕೆಗೆ ತೀರ್ಪುಕೊಡುವುದು ಸಲ್ಲದು; ನಿಮ್ಮ ತೀರ್ಪು ನ್ಯಾಯಬದ್ಧವಾಗಿರಬೇಕು,"
ಎಂದು ಹೇಳಿದರು.

ಇವರೇ ಲೋಕೋದ್ಧಾರಕರು!
                                                                                                                                                                                                                                                                       
25ಯೇಸುವಿನ ಮಾತನ್ನು ಕೇಳಿದ ಜೆರುಸಲೇಮಿನ ಕೆಲವರು,
"ಯೆಹೂದ್ಯರು ಕೊಲ್ಲಬೇಕೆಂದು ಹವಣಿಸುತ್ತಿರುವುದು ಈತನನ್ನೇ ಅಲ್ಲವೇ? ಇದೋ, ಈತ ಬಹಿರಂಗವಾಗಿ ಮಾತನಾಡುತ್ತಿದ್ದಾನೆ. 26ಆದರೂ ಈತನ ವಿರುದ್ಧ ಯಾರೂ ಧ್ವನಿಯೆತ್ತುತ್ತಿಲ್ಲ! ಈತನೇ ಲೋಕೋದ್ಧಾರಕನೆಂದು ಅವರಿಗೆ ಹೊಳೆದಿರಬಹುದೇ? 27ಲೋಕೋದ್ಧಾರಕನು ಕಾಣಿಸಿಕೊಳ್ಳುವಾಗ ಆತ ಎಲ್ಲಿಂದ ಬಂದನೆಂದು ಯಾರಿಗೂ ತಿಳಿಯುವುದಿಲ್ಲ. ಆದರೆ ಈತ ಎಲ್ಲಿಂದ ಬಂದ ಎಂಬುದು ನಮ್ಮೆಲ್ಲರಿಗೂ ತಿಳಿದಿದೆಯಲ್ಲಾ!"
ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು. 28ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸು ಆಗ ಗಟ್ಟಿಯಾದ ಧ್ವನಿಯಲ್ಲಿ,
"ನಾನು ಯಾರೆಂದು, ಎಲ್ಲಿಂದ ಬಂದೆನೆಂದು ನೀವು ಬಲ್ಲಿರಾ? ನಾನು ನನ್ನಷ್ಟಕ್ಕೆ ಬಂದವನಲ್ಲ; ನನ್ನನ್ನು ಕಳುಹಿಸಿದಾತನು ಸತ್ಯಸ್ವರೂಪಿ. ಆತನನ್ನು ನೀವು ಅರಿತಿಲ್ಲ. 29ಆದರೆ ನಾನಾತನನ್ನು ಅರಿತಿದ್ದೇನೆ. ಏಕೆಂದರೆ ನಾನು ಬಂದದ್ದು ಆತನಿಂದಲೇ. ಆತನೇ ನನ್ನನ್ನು ಕಳುಹಿಸಿದ್ದು,"
ಎಂದರು.
30ಇದನ್ನು ಕೇಳಿದ ಯೆಹೂದ್ಯರು ಯೇಸುವನ್ನು ಹಿಡಿದು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಗಳಿಗೆಯು ಬಾರದಿದ್ದ ಕಾರಣ ಯಾರೂ ಅವರ ಮೇಲೆ ಕೈಹಾಕಲಾಗಲಿಲ್ಲ. 31ಅಲ್ಲಿ ನೆರೆದಿದ್ದ ಹಲವರಿಗೆ ಯೇಸುವಿನಲ್ಲಿ ನಂಬಿಕೆ ಹುಟ್ಟಿತು.
"ಲೋಕೋದ್ಧಾರಕ ಬಂದಾಗ ಈತ ಮಾಡಿದ್ದಕ್ಕೂ ಮಿಗಿಲಾದ ಸೂಚಕಕಾರ್ಯಗಳನ್ನು ಮಾಡುವನೇ?"
ಎಂದುಕೊಂಡರು.

ಯೇಸುವನ್ನು ಬಂಧಿಸಲು ಸಂಚು
                                                                                                                       
32ಹೀಗೆ ಯೇಸುವನ್ನು ಕುರಿತು ಜನರಾಡುತ್ತಿದ್ದ ಗುಸುಗುಸು ಮಾತುಗಳು ಫರಿಸಾಯರ ಕಿವಿಯನ್ನು ಮುಟ್ಟಿತು. ಅವರೂ ಮುಖ್ಯಯಾಜಕರೂ ಯೇಸುವನ್ನು ಬಂಧಿಸಲು ಕಾವಲಾಳುಗಳನ್ನು ಕಳುಹಿಸಿದರು.
33ಆಗ ಯೇಸು,
"ಇನ್ನು ತುಸುಕಾಲ ಮಾತ್ರ ನಾನು ನಿಮ್ಮೊಡನೆ ಇರುತ್ತೇನೆ. ಅನಂತರ ನನ್ನನ್ನು ಕಳುಹಿಸಿದಾತನ ಬಳಿಗೆ ಹೊರಟುಹೋಗುತ್ತೇನೆ. 34ಆಗ ನೀವು ನನ್ನನ್ನು ಹುಡುಕುವಿರಿ. ಆದರೆ ನಾನು ನಿಮಗೆ ಕಾಣಲು ಸಿಗುವುದಿಲ್ಲ. ನಾನು ಇರುವಲ್ಲಿಗೆ ನೀವು ಬರುವಂತೆಯೂ ಇಲ್ಲ,"
ಎಂದು ಹೇಳಿದರು.
35ಯೆಹೂದ್ಯ ಅಧಿಕಾರಿಗಳು,
"ನಮಗೆ ಕಾಣಲು ಸಿಗದ ಹಾಗೆ ಇವನು ಎಲ್ಲಿಗೆ ಹೋಗುತ್ತಾನೆ? ಗ್ರೀಕರ ನಡುವೆ ಚದರಿ ಹೋಗಿರುವ ಯೆಹೂದ್ಯರಲ್ಲಿಗೆ ಹೋಗಿ ಅವರಿಗೆ ಬೋಧಿಸುವನೆ? 36'ನನ್ನನ್ನು ಅರಸುವಿರಿ, ಆದರೆ ನಾನು ನಿಮಗೆ ಕಾಣಸಿಗುವುದಿಲ್ಲ. ನಾನಿರುವಲ್ಲಿಗೆ ನೀವು ಬರುವಂತಿಲ್ಲ' ಎಂದು ಇವನು ಹೇಳುವುದರ ಅರ್ಥವೇನು?"
ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.

ಜೀವದಾಯಕ ಹೊನಲು

37ಹಬ್ಬದ ಕೊನೆಯ ದಿನ ಮಹಾದಿನವಾಗಿತ್ತು.
ಅಂದು ಯೇಸು ಅಲ್ಲಿ ನಿಂತುಕೊಂಡು,
"ಬಾಯಾರಿದವನು ನನ್ನ ಬಳಿಗೆ ಬಂದು ಕುಡಿಯಲಿ. 38ಪವಿತ್ರಗ್ರಂಥದಲ್ಲಿ ಹೇಳಿರುವಂತೆ, ನನ್ನಲ್ಲಿ ವಿಶ್ವಾಸವಿಡುವವನ ಹೃದಯದಿಂದ ಜೀವಜಲವು ಹೊನಲುಹೊನಲಾಗಿ ಹರಿಯುವುದು,"
ಎಂದು ಗಟ್ಟಿಯಾದ ಧ್ವನಿಯಲ್ಲಿ ಹೇಳಿದರು. 39ತಮ್ಮಲ್ಲಿ ವಿಶ್ವಾಸವಿಡುವವರು ಪಡೆಯಲಿರುವ ಪವಿತ್ರಾತ್ಮರನ್ನು ಕುರಿತೇ ಯೇಸು ಹೀಗೆ ಹೇಳಿದ್ದು. ಪವಿತ್ರಾತ್ಮನು ಇನ್ನೂ ಬಂದಿರಲಿಲ್ಲ. ಏಕೆಂದರೆ, ಯೇಸು ಇನ್ನೂ ಮೇಲೇರಿ ಮಹಿಮೆಯನ್ನು ಪಡೆದಿರಲಿಲ್ಲ.

ಜನರ ಭಾವನೆಗಳು ಭಿನ್ನ
                                                                                                                                                                                                                                                                                                                                                                                               
40ಇದನ್ನು ಕೇಳಿ ನೆರೆದಿದ್ದವರಲ್ಲಿ ಕೆಲವರು,
"ಬರಬೇಕಾಗಿದ್ದ ಪ್ರವಾದಿ ಈತನೇ ಸರಿ,"
ಎಂದರು.
41ಇನ್ನೂ ಕೆಲವರು,
"ಈತನೇ ಲೋಕೋದ್ಧಾರಕ,"
ಎಂದರು.
ಮತ್ತೆ ಕೆಲವರು,
"ಲೋಕೋದ್ಧಾರಕ ಗಲಿಲೇಯದಿಂದ ಬರುವುದುಂಟೇ? 42ಆತ ದಾವೀದನ ವಂಶಜ; ಆತನು ಹುಟ್ಟುವುದು ದಾವೀದನ ಊರಾದ ಬೆತ್ಲೆಹೆಂನಲ್ಲಿ ಎಂದು ಪವಿತ್ರಗ್ರಂಥದಲ್ಲಿ ಹೇಳಿದೆಯಲ್ಲವೇ?"
ಎಂದು ವಾದಿಸಿದರು. 43ಹೀಗೆ ಯೇಸುವಿನ ಕುರಿತು ಜನರಲ್ಲಿ ಭಿನ್ನ ಭಿನ್ನ ಅಭಿಪ್ರಾಯಗಳು ಮೂಡಿದವು. 44ಕೆಲವರಿಗಂತೂ ಯೇಸುವನ್ನು ಹಿಡಿದು ಬಂಧಿಸಬೇಕೆನಿಸಿತು. ಆದರೆ ಯಾರೂ ಅವರ ಮೇಲೆ ಕೈಹಾಕಲು ಮುಂದಾಗಲಿಲ್ಲ.

ವಿಶ್ವಾಸಹೀನ ಮುಖಂಡರು

45ಕಾವಲಾಳುಗಳು ಹಿಂದಿರುಗಿದಾಗ, ಮುಖ್ಯಯಾಜಕರು ಮತ್ತು ಫರಿಸಾಯರು,
"ನೀವು ಅವನನ್ನೇಕೆ ಹಿಡಿದು ತರಲಿಲ್ಲ?"
ಎಂದು ಕೇಳಿದರು.
46ಅವರು,
"ಆತನು ಮಾತನಾಡಿದ ಹಾಗೆ ಯಾರೂ ಕೂಡ ಮಾತನಾಡಿರಲಿಲ್ಲ,"
ಎಂದು ಉತ್ತರಿಸಿದರು.
47ಅದಕ್ಕೆ ಫರಿಸಾಯರು,
"ಏನು? ನೀವೂ ಕೂಡ ಅವನಿಗೆ ಮರುಳಾಗಿಬಿಟ್ಟಿರಾ? 48ನಮ್ಮ ಮುಖಂಡರಲ್ಲಾಗಲಿ, ಫರಿಸಾಯರಲ್ಲಾಗಲಿ ಯಾರಾದರೂ ಅವನನ್ನು ನಂಬಿದ್ದುಂಟೆ? 49ಧರ್ಮಶಾಸ್ತ್ರದ ಗಂಧವೂ ಇಲ್ಲದ ಜನಜಂಗುಳಿ ಶಾಪಗ್ರಸ್ತವಾಗಿದೆ,"
ಎಂದರು. 50ಅಲ್ಲಿದ್ದ ಫರಿಸಾಯರಲ್ಲಿ ನಿಕೊದೇಮನು ಒಬ್ಬನು. ಹಿಂದೆ ಈತ ಯೇಸುವನ್ನು ಕಾಣಲು ಬಂದಿದ್ದ. 51ಈತನು ಅವರಿಗೆ,
"ಒಬ್ಬ ವ್ಯಕ್ತಿಯ ಹೇಳಿಕೆಯನ್ನು ಕೇಳದೆ ಆತನು ಮಾಡಿರುವುದನ್ನು ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು ಶಾಸ್ತ್ರಸಮ್ಮತವೇ?"
 ಎಂದು ಕೇಳಿದನು.
52ಅದಕ್ಕೆ ಅವರು,
"ನೀನೂ ಗಲಿಲೇಯದವನಾ? ಪವಿತ್ರಗ್ರಂಥವನ್ನು ಓದಿ ನೋಡು; ಗಲಿಲೇಯದಿಂದ ಯಾವ ಪ್ರವಾದಿಯೂ ತಲೆಯೆತ್ತುವುದಿಲ್ಲ, ಎಂಬುದು ನಿನಗೆ ಗೊತ್ತಾಗುತ್ತದೆ,"

ಎಂದು ಎದುರುತ್ತರ ನೀಡಿದನು. 53ಬಳಿಕ ಎಲ್ಲರೂ ತಮ್ಮತಮ್ಮ ಮನೆಗಳಿಗೆ ತೆರಳಿದರು.






ಅಧ್ಯಾಯಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ