ಅಧ್ಯಾಯ 9



ಹುಟ್ಟು ಕುರುಡನಿಗೆ ದೃಷ್ಟಿದಾನ

1ಒಮ್ಮೆ ಯೇಸು ನಡೆದುಕೊಂಡು ಹೋಗುತ್ತಿದ್ದಾಗ, ಒಬ್ಬ ಹುಟ್ಟು ಕುರುಡನನ್ನು ಕಂಡರು. 2ಶಿಷ್ಯರು,
 "ಗುರುದೇವಾ, ಇವನು ಕುರುಡನಾಗಿ ಹುಟ್ಟಬೇಕಾದರೆ ಅದಕ್ಕೆ ಯಾರ ಪಾಪ ಕಾರಣ? ಇವನದೋ ಅಥವಾ ಇವನ ಹೆತ್ತವರದೋ?"
ಎಂದು ಕೇಳಿದರು.
3ಅದಕ್ಕೆ ಉತ್ತರವಾಗಿ ಯೇಸು,
"ಇವನ ಪಾಪವಾಗಲಿ, ಇವನನ್ನು ಹೆತ್ತವರ ಪಾಪವಾಗಲಿ ಇದಕ್ಕೆ ಕಾರಣವಲ್ಲ, ದೇವರ ಕಾರ್ಯವು ಇವನಲ್ಲಿ ವ್ಯಕ್ತವಾಗುವಂತೆ ಹೀಗಾಗಿದೆ. 4ಹಗಲಿರುವಾಗಲೇ ನನ್ನನ್ನು ಕಳುಹಿಸಿರುವಾತನ ಕೆಲಸವನ್ನು ನಾನು ಮಾಡುತ್ತಿರಬೇಕು. ರಾತ್ರಿಯಾದ ಮೇಲೆ ಯಾರೂ ಕೆಲಸ ಮಾಡಲಾಗದು. 5ಜಗತ್ತಿನಲ್ಲಿ ನಾನಿರುವಾಗ ಜಗದ ಜ್ಯೋತಿ ನಾನೇ,"
ಎಂದು ನುಡಿದರು. 6ತರುವಾಯ ನೆಲದಲ್ಲಿ ಉಗುಳಿ, ಮಣ್ಣಿನ ಲೇಪ ಮಾಡಿ, ಅದನ್ನು ಕುರುಡನ ಕಣ್ಣಿಗೆ ಲೇಪಿಸಿ,
"ನೀನು ಸಿಲೋವಾಮ್‌ನ ಕೊಳಕ್ಕೆ ಹೋಗಿ ತೊಳೆದುಕೋ,"
ಎಂದು ಹೇಳಿದರು. 7('ಸಿಲೋವಾಮ್‌' ಎಂದರೆ 'ಕಳುಹಿಸಲಾದವನು' ಎಂದರ್ಥ). ಅದರಂತೆಯೇ ಆ ಕುರುಡನು ಹೋಗಿ ಕಣ್ಣುಗಳನ್ನು ತೊಳೆದುಕೊಂಡನು; ಹಿಂದಿರುಗಿದಾಗ ಅವನಿಗೆ ಕಣ್ಣು ಕಾಣಿಸುತ್ತಿದ್ದವು.
8ಅವನ ನೆರೆಯವರು ಮತ್ತು ಹಿಂದೆ ಭಿಕ್ಷೆ ಬೇಡುತ್ತಿದ್ದಾಗ ಅವನನ್ನು ನೋಡಿದ್ದವರು,
"ಭಿಕ್ಷೆ ಬೇಡುತ್ತಾ ಕುಳಿತುಕೊಂಡಿದ್ದವನು ಇವನೇ ಅಲ್ಲವೆ?"
ಎಂದು ವಿಚಾರಿಸಿದರು.
9"ಹೌದು, ಅವನೇ,"
ಎಂದರು ಕೆಲವರು.
"ಇಲ್ಲ, ಇವನು ಅವನಂತೆ ಕಾಣುತ್ತಾನೆ, ಅಷ್ಟೆ,"
ಎಂದರು ಇತರರು. ಆ ಕುರುಡನು,
"ನಾನೇ ಅವನು"
ಎಂದು ತಿಳಿಸಿದನು.
10ಆಗ ಅವರು,
"ಹಾಗಾದರೆ ನಿನಗೆ ಕಣ್ಣು ಹೇಗೆ ಬಂತು?"
ಎಂದು ಕೇಳಿದರು.
11ಅದಕ್ಕೆ ಅವನು,
"ಯೇಸು ಎಂಬುವವರು ಮಣ್ಣಿನಲೇಪ ಮಾಡಿ ನನ್ನ ಕಣ್ಣಿಗೆ ಹಚ್ಚಿ, ಸಿಲೋವಾಮ್‌ಗೆ ಹೋಗಿ ತೊಳೆದುಕೋ ಎಂದು ಹೇಳಿದರು. ನಾನು ಹೋಗಿ ತೊಳೆದುಕೊಂಡೆ; ನನಗೆ ಕಣ್ಣು ಬಂದವು,"
ಎಂದು ಹೇಳಿದನು.
12ಅದಕ್ಕೆ ಅವರು,
"ಆತ ಎಲ್ಲಿದ್ದಾನೆ?"
ಎಂದು ವಿಚಾರಿಸಿದರು. ಉತ್ತರವಾಗಿ ಅವನು,
"ನಾನರಿಯೆ,"
ಎಂದನು.
                                                                                                                                                                                                                                                                                                                       
ಫರಿಸಾಯರಿಂದ ವಿಚಾರಣೆ

13ಆಗ ಆ ಜನರು ಅವನನ್ನು ಫರಿಸಾಯರ ಬಳಿಗೆ ಕರೆದುಕೊಂಡು ಹೋದರು. 14ಏಕೆಂದರೆ, ಯೇಸು ಮಣ್ಣಿನಲೇಪವನ್ನು ಮಾಡಿ ಅವನಿಗೆ ಕಣ್ಣುಕೊಟ್ಟ ದಿನವು ಸಬ್ಬತ್‌ದಿನವಾಗಿತ್ತು. 15ಕಣ್ಣು ಬಂದುದು ಹೇಗೆಂದು ಫರಿಸಾಯರು ಮತ್ತೆ ಅವನನ್ನು ಕೇಳಿದರು.
"ಯೇಸು ನನ್ನ ಕಣ್ಣುಗಳಿಗೆ ಮಣ್ಣಿನಲೇಪ ಹಚ್ಚಿದರು; ನಾನು ಹೋಗಿ ಕಣ್ಣುಗಳನ್ನು ತೊಳೆದುಕೊಳ್ಳುತ್ತಲೇ ನನಗೆ ಕಣ್ಣು ಬಂದವು,"
ಎಂದನು ಅವನು. 16ಫರಿಸಾಯರಲ್ಲಿ ಕೆಲವರು, "ಹೀಗೆ ಮಾಡಿದವನು ದೇವರಿಂದ ಬಂದವನಲ್ಲ, ಅವನು ಸಬ್ಬತ್‌ ನಿಯಮವನ್ನು ಪಾಲಿಸುವುದಿಲ್ಲ," ಎಂದರು. ಇತರರು,
 "ಪಾಪಿಯಾದವನು ಇಂತಹ ಸೂಚಕ ಕಾರ್ಯಗಳನ್ನು ಮಾಡಲು ಸಾಧ್ಯವೇ?"
ಎಂದರು. ಹೀಗೆ ಅವರಲ್ಲೇ ಭಿನ್ನಭೇಧವುಂಟಾಯಿತು.
17ಆದ್ದರಿಂದ ಆ ಫರಿಸಾಯರು ಆ ಕುರುಡನನ್ನು ಕುರಿತು,
"ಅವನೇ ನಿನಗೆ ಕಣ್ಣುಕೊಟ್ಟನೆಂದು ಹೇಳುವೆಯಲ್ಲಾ, ಅವನ ಬಗ್ಗೆ ನಿನಗೇನು ಅನ್ನಿಸುತ್ತದೆ?" ಎಂದು ವಿಚಾರಿಸಿದರು. ಅದಕ್ಕೆ ಅವನು, "ಅವರೊಬ್ಬ ಪ್ರವಾದಿಯೇ ಸರಿ,"
ಎಂದನು. 18ಆ ಕುರುಡನು ಹಿಂದೆ ನಿಜವಾಗಿಯೂ ಕುರುಡನಾಗಿದ್ದು ಈಗ ದೃಷ್ಟಿ ಪಡೆದಿದ್ದಾನೆ ಎಂದು ಯೆಹೂದ್ಯ ಅಧಿಕಾರಿಗಳು ನಂಬಲು ಒಪ್ಪಲಿಲ್ಲ. 19ಈ ಕಾರಣ ಅವನ ಹೆತ್ತವರನ್ನು ಕರೆಯಿಸಿ,
20"ಇವನು ನಿಮ್ಮ ಮಗನೇ? ಇವನು ಹುಟ್ಟುಕುರುಡನಾಗಿದ್ದನೇ? ಹಾಗಾದರೆ ಇವನಿಗೆ ಈಗ ಕಣ್ಣು ಬಂದದ್ದು ಹೇಗೆ?"
ಎಂದು ಕೇಳಿದರು. 21ಅದಕ್ಕೆ ಅವನ ತಂದೆತಾಯಿಗಳು,
"ಇವನಿಗೆ ಕಣ್ಣುಗಳು ಹೇಗೆ ಬಂದವೋ ನಮಗೆ ಗೊತ್ತಿಲ್ಲ; ಇವನಿಗೆ ಕಣ್ಣುಕೊಟ್ಟವರು ಯಾರೆಂದೂ ನಮಗೆ ತಿಳಿಯದು. ಇವನನ್ನೇ ಕೇಳಿ, ಹೇಗೂ ವಯಸ್ಸಿಗೆ ಬಂದಿದ್ದಾನಲ್ಲವೇ? ತನ್ನ ವಿಷಯವಾಗಿ ತಾನೇ ಮಾತನಾಡಬಲ್ಲ,"
ಎಂದು ಉತ್ತರಿಸಿದರು. 22ಅವರು ಹೀಗೆ ಹೇಳಿದ್ದು ಯೆಹೂದ್ಯ ಅಧಿಕಾರಿಗಳ ಅಂಜಿಕೆಯಿಂದ. ಏಕೆಂದರೆ, ಯಾರಾದರೂ ಯೇಸುವನ್ನು ಲೋಕೋದ್ಧಾರಕ ಎಂದು ಒಪ್ಪಿಕೊಂಡರೆ ಅಂತಹವರಿಗೆ ಪ್ರಾರ್ಥನಾಮಂದಿರದಿಂದ ಬಹಿಷ್ಕಾರ ಹಾಕಬೇಕೆಂದು ಅಧಿಕಾರಿಗಳು ಈ ಮೊದಲೇ ಗೊತ್ತು ಮಾಡಿದ್ದರು. 23ಆದುದರಿಂದಲೇ, 'ಅವನು ವಯಸ್ಸಿಗೆ ಬಂದವನು, ಅವನನ್ನೇ ಕೇಳಿ' ಎಂದು ಅವನ ತಂದೆತಾಯಿಗಳು ಹೇಳಿದ್ದು. 24ಅಧಿಕಾರಿಗಳು ಆ ಹುಟ್ಟುಕುರುಡನನ್ನು ಮತ್ತೆ ಕರೆಯಿಸಿ,
"ನೀನು ದೇವರ ಮುಂದೆ ಪ್ರಮಾಣ ಮಾಡಿ ಹೇಳು. ಆ ಮನುಷ್ಯ ಪಾಪಿಯೆಂದು ನಮಗೆ ಗೊತ್ತು,"
ಎಂದು ಕೇಳಿದರು.
25ಉತ್ತರವಾಗಿ,
"ಅವನು ಪಾಪಿಯೋ ಅಲ್ಲವೋ ನಾನರಿಯೆ; ಆದರೆ ಇಷ್ಟು ಮಾತ್ರ ನಾನು ಬಲ್ಲೆ. ನಾನೊಮ್ಮ ಕುರುಡನಾಗಿದ್ದೆ; ಆದರೆ ಈಗ ಕಣ್ಣು ಕಾಣಿಸುತ್ತದೆ,"
ಎಂದು ಹೇಳಿದನು.
26"ಅವನು ನಿನಗೇನು ಮಾಡಿದ? ನಿನಗೆ ಹೇಗೆ ಕಣ್ಣು ಬರಿಸಿದ?"
ಎಂದು ಅವರು ಮತ್ತೆ ಪ್ರಶ್ನಿಸಿದರು.
27ಅವನು,
"ನಿಮಗೆ ಆಗಲೇ ಹೇಳಿದ್ದೇನೆ. ಆದರೆ ನೀವು ನಂಬುವುದಿಲ್ಲ. ಅದನ್ನೇ ಮತ್ತೆ ಮತ್ತೆ ಏಕೆ ಕೇಳುತ್ತೀರಿ? ಅವರ ಶಿಷ್ಯರಾಗಲು ನಿಮಗೂ ಮನಸ್ಸಿದೆಯೇ?"
ಎಂದನು. 28ಆಗ ಅಧಿಕಾರಿಗಳು ಅವನನ್ನು ಶಪಿಸಿದರು.
"ನೀನೆ ಅವನ ಶಿಷ್ಯ. ನಾವು ಮೋಶೆಯ ಶಿಷ್ಯರು. 29ಮೋಶೆಯೊಡನೆ ದೇವರು ಮಾತನಾಡಿದರೆಂಬುದನ್ನು ನಾವು ಬಲ್ಲೆವು. ಆದರೆ ಇವನು ಎಲ್ಲಿಯವನೋ ನಾವು ಅರಿಯೆವು,"
ಎಂದರು.
30ಅದಕ್ಕೆ ಆ ಕುರುಡ,
"ಏನಾಶ್ಚರ್ಯ! ನನಗೆ ಕಣ್ಣು ಬರಿಸಿದ್ದಾರೆ. ಆದರೂ ಅವನು ಎಲ್ಲಿಯವನೋ ನಾವು ಅರಿಯೆವು' ಎನ್ನುತ್ತೀರಿ. 31ದೇವರು ಪಾಪಿಗಳಿಗೆ ಓಗೊಡುವುದಿಲ್ಲ. ಯಾರು ಭಕ್ತಿಯಿಂದ ಅವರ ಚಿತ್ತದಂತೆ ನಡೆಯುತ್ತಾರೋ ಅವರಿಗೆ ಓಗೊಡುತ್ತಾರೆಂದು ನಮಗೆಲ್ಲಾ ತಿಳಿದಿದೆ. 32ಹುಟ್ಟು ಕುರುಡನಿಗೆ ಯಾರಾದರೂ ಕಣ್ಣು ಕೊಟ್ಟ ಸುದ್ದಿಯನ್ನು ಲೋಕ ಸೃಷ್ಟಿಯಾದಾಗಿನಿಂದ ಒಬ್ಬರೂ ಕೇಳಿಲ್ಲ. 33ಇವರು ದೇವರಿಂದ ಬಂದವರಲ್ಲದಿದ್ದರೆ ಇಂಥದ್ದೇನನ್ನೂ ಮಾಡಲಾಗುತ್ತಿರಲಿಲ್ಲ,"
ಎಂದನು.
34ಆಗ ಫರಿಸಾಯರು,
"ಪಾಪದಲ್ಲೇ ಹುಟ್ಟಿ ಬೆಳೆದವನು ನೀನು. ನಮಗೆ ಬುದ್ದಿ ಹೇಳಹೊರಟೆಯಾ?"
ಎಂದು ಹೇಳಿ ಅವನನ್ನು ಹೊರಗೆ ತಳ್ಳಿಬಿಟ್ಟರು.

ಆತ್ಮದ ಅಂಧತ್ವ
                                                                                                                                                                                                                         35ಹುಟ್ಟುಕುರುಡನನ್ನು ಹೊರಕ್ಕೆ ತಳ್ಳಿದ ವಾರ್ತೆಯು ಯೇಸುವಿನ ಕಿವಿಗೆ ಮುಟ್ಟಿತು. ಯೇಸು ಅವನನ್ನು ಕಂಡು,
"ನರಪುತ್ರನಲ್ಲಿ ನಿನಗೆ ವಿಶ್ವಾಸವಿದೆಯೇ?"
ಎಂದು ಕೇಳಿದರು.
36ಅವನು,
"ಅವರು ಯಾರೆಂದು ತಿಳಿಸಿ ಸ್ವಾಮಿ, ನಾನು ವಿಶ್ವಾಸಿಸುತ್ತೇನೆ,"
ಎಂದನು.
ಯೇಸು,
37"ನೀನು ಆತನನ್ನು ಕಂಡಿದ್ದೀಯ, ನಿನ್ನೊಡನೆ ಮಾತನ್ನಾಡುತ್ತಿರುವ ನಾನೇ ಆತನು,"
ಎಂದರು.
38"ಸ್ವಾಮಿ, ನಾನು ವಿಶ್ವಾಸಿಸುತ್ತೇನೆ,"
ಎಂದು ಹೇಳುತ್ತಾ ಅವನು ಯೇಸುವಿಗೆ ಅಡ್ಡಬಿದ್ದನು.
39ಆಗ ಯೇಸು,
"ಕುರುಡರು ಕಾಣುವಂತೆಯೂ ಕಾಣುವವರು ಕುರುಡರಾಗುವಂತೆಯೂ ತೀರ್ಪುಕೊಡಲೆಂದೇ ನಾನು ಈ ಲೋಕಕ್ಕೆ ಬಂದುದು,"
ಎಂದು ನುಡಿದರು.
40ಅಲ್ಲಿ ನಿಂತಿದ್ದ ಫರಿಸಾಯರು ಈ ಮಾತನ್ನು ಕೇಳಿ,
"ಹಾಗಾದರೆ ನಾವೂ ಕೂಡ ಕುರುಡರೇನು?"
ಎಂದು ಪ್ರಶ್ನಿಸಿದರು.
41ಯೇಸು,
"ನೀವು ಕುರುಡರೇ ಆಗಿದ್ದರೆ ಪಾಪಿಗಳಾಗುತ್ತಿರಲಿಲ್ಲ, ಆದರೆ ನಮಗೆ ಕಣ್ಣು ಕಾಣುತ್ತದೆ ಎಂದು ಹೇಳಿಕೊಳ್ಳುತ್ತೀರಿ; ಆದ್ದರಿಂದ ನೀವು ಪಾಪಿಗಳೇ ಆಗಿದ್ದೀರಿ,"

 ಎಂದರು.




ಅಧ್ಯಾಯಗಳು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ