ಯೇಸುವು
ಶಿಲುಬೆಯಲ್ಲಿ ತೂಗಾಡುತ್ತಿದ್ದ ಸಂದರ್ಭ; ಮರಣವಿನ್ನೂ ಅವರನ್ನು
ಅಪ್ಪಿಲ್ಲ. ಅಪಾರ ನೋವು ಸಂಕಟಗಳು
ಅವರನ್ನು ಆವರಿಸಿದೆ. ಶಿಲುಬೆಗೇರುವ ಮೊದಲು ಅವರ ಹಿಂದೆ
ಅಪಾರ ಜನಸಂದಣಿ ಇರುತ್ತಿತ್ತು; ಆದರೆ
ಆ ದಿನ: ಆ
ಹೃದಯವನ್ನೇ ಹಿಂಡುವಂತಹ ಆ ಧಾರುಣ ಸನ್ನಿವೇಷದಲ್ಲಿ
ಯೇಸುವಿನ ಬಳಿ ಇದ್ದವರು ಕೆಲವರು
ಮಾತ್ರ. ಶಿಲುಬೆಯ ಸನಿಹದಲ್ಲಿ ದುಗುಡದಿಂದ
ಯೇಸುವಿನ ಮಾತೆ ಮರಿಯ ನಿಂತಿದ್ದರೆ;
ದುಃಖವೆಂಬ ಅಲಗೊಂದು ಅವರ ಅಂತರಾಳವನ್ನು
ಸೀಳುತ್ತಿತ್ತು, ಅವರ ಸಂಗಡ ಇದ್ದವರೆಂದರೆ
ಅವರ ಪತಿ ಜೋಸೆಫರ ಸೋದರನಾದ
ಕ್ಲೆಯೋಫನ ಪತ್ನಿ ಮರಿಯ ಹಾಗೂ
ಮಗ್ದಲದ ಮರಿಯ. ಹಿಂದಿನ
ಮೂರು ವರ್ಷಗಳಿಂದ ಯೇಸುವಿಗೆ ಬೆಂಗಾವಲಂತೆ ಇದ್ದ ಅವರ ಶಿಷ್ಯವರ್ಗ
ಈಗ ಅಲ್ಲಿರಲಿಲ್ಲ; ಯೇಸುವೇ ಮುಂತಿಳಿಸಿದಂತೆ ಶಿಷ್ಯವರ್ಗ
ದಿಕ್ಕಾಪಾಲಾಗಿ ಚೆದುರಿಹೋಗಿತ್ತು. ಆದರೆ ಅವರ ಆಪ್ತಶಿಷ್ಯ
'ಯೊವಾನ್ನ' ಮಾತ್ರ ಅಲ್ಲಿದ್ದ. ಯೇಸುವನ್ನು
ಬಂಧಿಸುವ ಸಮಯದಲ್ಲಿ ಯೊವಾನ್ನನು ಯೇಸುವನ್ನು ಬಿಟ್ಟು ಓಡಿ ಹೋಗಿದ್ದರೂ
ಅನಂತರ ಪೇತ್ರನೊಂದಿಗೆ ಪ್ರಧಾನಯಾಜಕನ ಮನೆಯ ಅಂಗಳಕ್ಕೆ ಬರುತ್ತಾನೆ.
ಅಲ್ಲಿ ಪೇತ್ರನು ಮೂರು ಬಾರಿ
ಯೇಸುವನ್ನು ನಿರಾಕರಿಸುತ್ತಾನೆ. ಅದರ ನಂತರ ಯೊವಾನ್ನ
ಕಾಣಿಸಿಕೊಳ್ಳುತ್ತಿರುವುದು ಯೇಸುವನ್ನು ಗೊಲ್ಗೊಥ ಬೆಟ್ಟದ ಮೇಲೆ
ಶಿಲುಬೆಗೇರಿಸಿದಾಗಲೇ. ಯೇಸುವಿನ ಆಪ್ತಶಿಷ್ಯನೆನಿಸಿದ್ದ ಯೊವಾನ್ನ
ಪ್ರಾಯಶಃ ಯೇಸುವನ್ನು ಬಿಟ್ಟಿರಲಾಗದೆ ಅವರನ್ನು ಶಿಲುಬೆಗೇರಿಸಿದ ಸ್ಥಳಕ್ಕೆ
ಹಾಜರಾಗುತ್ತಾನೆ. ಅದೇ ಕಾರಣಕ್ಕೆ ಇರಬಹುದು
ಯೇಸು ತಮ್ಮ ತಾಯಿಗೆ,
"ಅಮ್ಮಾ, ಇದೋ ನಿನ್ನ ಮಗನು,"
ಎಂದು ಹೇಳಿ ಆಪ್ತಶಿಷ್ಯನನ್ನು ತಮ್ಮ
ತಾಯಿಗೆ ಒಪ್ಪಿಸುತ್ತಾರೆ. ಹಾಗೆಯೇ ಯೊವಾನ್ನನಿಗೂ, "ಇದೋ
ನಿನ್ನ ತಾಯಿ" ಎಂದು ತಮ್ಮ ಮಾತೆಯನ್ನು
ಅವನಿಗೆ ಸಮರ್ಪಿಸುತ್ತಾರೆ. ಯೇಸುವಿನ ಮರಣಾನಂತರ ಅವರ
ಮಾತೆ ಯೊವಾನ್ನನ ಮನೆಯಲ್ಲೇ ಉಳಿದುಕೊಳ್ಳುತ್ತಾರೆ ಎಂದು ಯೊವಾನ್ನನ ಸುಸಂದೇಶದಲ್ಲಿ
ಹೇಳಲಾಗಿದೆ(ಯೊವಾನ್ನ 19:27).
ಹೀಗೆ ಯೇಸುವಿನ ಅಂತ್ಯಕಾಲದಲ್ಲಿ ಅವರ
ಸನಿಹ ಇದ್ದ ಏಕೈಕ ಶಿಷ್ಯ
ಯೊವಾನ್ನನು ಒಂದು ರೀತಿಯಲ್ಲಿ ಯೇಸುವಿನ
ಉತ್ತರಾಧಿಕಾರಿಯಂತೆ ಕಂಡು ಬರುತ್ತಾನೆ. ಯೇಸುವಿನ
ಹನ್ನೆರಡು ಮಂದಿ ಶಿಷ್ಯರಲ್ಲಿ ಯೇಸುವಿಗೆ
ಅತ್ಯಂತ ಆಪ್ತರಾದವರು ಮೂವರು; ಸಿಮೋನ ಪೇತ್ರನೂ
ಸೇರಿದಂತೆ ಜೆಬೆದೇಯ ಮತ್ತು ಸಲೋಮೆಯ
ಮಕ್ಕಳಾದ ಯಕೋಬ ಮತ್ತು ಯೊವಾನ್ನರೇ
ಆ ಮೂರು ಮಂದಿ.
ಅದರಲ್ಲೂ ವಿಶೇಷವಾಗಿ ಕಿರಿಯವರಾದ ಯಕೋಬ ಮತ್ತು ಯೊವಾನ್ನರು
ಯೇಸುವಿಗೆ ಅಚ್ಚುಮೆಚ್ಚು. ಇವರೀರ್ವರನ್ನು ಯೇಸು 'ಬೊವನೆರ್ಗೆಸ್' ಎಂದರೆ
'ಸಿಡಿಲಮರಿಗಳು' ಎಂದು ಕರೆದಿದ್ದಾರೆ(ಮಾರ್ಕ
3:17). ವಿಶೇಷ ಸಂದರ್ಭಗಳಲ್ಲಿ ಉಳಿದ
ಶಿಷ್ಯರುಗಳಿಗೆ ಪ್ರವೇಶವಿಲ್ಲದೆಡೆ ಈ ಮೂವರಿಗೆ ಮಾತ್ರ
ಪ್ರವೇಶವಿರುತ್ತಿತ್ತು. ಯೇಸುವು
ಎತ್ತರವಾದ ಬೆಟ್ಟದ ಮೇಲೆ ರೂಪಾಂತರ
ಹೊಂದುವಾಗ ಅವರ ಸನಿಹವಿದ್ದವರು ಈ
ಮೂವರು ಶಿಷ್ಯರು(ಮತ್ತಾಯ 17:1).
ಯಾಯಿರನ ಮಗಳು ತೀರಿಹೋದಾಗ ಅವರ
ಮನೆಯೊಳಕ್ಕೆ ಯೇಸುವು ಪ್ರವೇಶಿಸುವ ಸಂದರ್ಭದಲ್ಲಿ
ತಮ್ಮೊಡನೆ ಒಳಕ್ಕೆ ಕರೆದುಕೊಂಡು ಹೋದದ್ದೂ
ಈ ಮೂವರನ್ನೇ!(ಮಾರ್ಕ
5:37) ಅದೇ ರೀತಿಯಲ್ಲಿ ಗೆತ್ಸೆಮನೆ
ತೋಪಿನಲ್ಲಿ ಯೇಸು, "ನಾನು ಪ್ರಾರ್ಥನೆ ಮಾಡಿ
ಬರುವವರೆಗೆ ನೀವು ಇಲ್ಲೇ ಕುಳಿತಿರಿ,"
ಎಂದು ಶಿಷ್ಯರಿಗೆ ಹೇಳಿ ತಮ್ಮೊಡನೆ ಕರೆದುಕೊಂಡು
ಹೊರಟಿದ್ದೂ ಇವರನ್ನೇ(ಮತ್ತಾಯ 26:37).
ಯೊವಾನ್ನನಂತೂ ಯೇಸುವಿಗೆ ಎಷ್ಟು ಆಪ್ತನಾಗಿದ್ದನೆಂದರೆ, ಅಂತಿಮ
ಭೋಜನದ ವೇಳೆಯಲ್ಲಿ ಯೇಸು ತಮ್ಮನ್ನು ತಮ್ಮ
ಶಿಷ್ಯವರ್ಗದಲ್ಲೇ ಓರ್ವನು ಶತ್ರುಗಳ ಕೈವಶ
ಮಾಡುತ್ತಾನೆಂದು ಶಿಷ್ಯರಿಗೆ ಹೇಳುತ್ತಿದ್ದಾಗ ಅವರ ಎದೆಗೆ ಒರಗಿ
ಕುಳಿತಿದ್ದ ಎಂಬ ವರ್ಣನೆ ಯೊವಾನ್ನನ
ಶುಭಸಂದೇಶದಲ್ಲಿ ಕಾಣಲು ಸಿಗುತ್ತದೆ(ಯೊವಾನ್ನ
21:20).
ಯೇಸುವಿನ
ಬಂಧನವಾದ ಘಳಿಗೆಯಲ್ಲಿ ಕಾಣಿಸದ ಯೊವಾನ್ನ ಪ್ರತ್ಯಕ್ಷನಾಗುವುದು
ಪೇತ್ರನೊಂದಿಗೆ ಪ್ರಧಾನಯಾಜಕನ ಮನೆಯ ಅಂಗಳದಲ್ಲಿ. ಪ್ರಧಾನಯಾಜಕನ
ಪರಿಚಯ ಮೊದಲೇ ಯೊವಾನ್ನನಿಗಿರುತ್ತದೆ. ಹಾಗೆಂದು
ತನ್ನ ಸುಸಂದೇಶದಲ್ಲಿ ಅವನು ಹೇಳಿಕೊಂಡಿದ್ದಾನೆ(ಯೊವಾನ್ನ
18:15). ಆದರೆ ಅದು ತಾನೇ
ಎಂಬುದನ್ನು ಅವನೆಲ್ಲೂ ಹೇಳಿಕೊಂಡಿಲ್ಲ. ಸಾಮಾನ್ಯವಾಗಿ, 'ಪ್ರಧಾನಯಾಜಕನಿಗೆ ಪರಿಚಿತನಾಗಿದ್ದ ಇನ್ನೊಬ್ಬ ಶಿಷ್ಯ' ಎಂದರೆ ನೆನಪಿಗೆ
ಬರುವುದು ನಿಕೊದೇಮ. ನಿಕೊದೇಮನು ಯೇಸುವಿನ ಶಿಷ್ಯನೇ. ಇವನೊಬ್ಬ
ಫರಿಸಾಯ. ಇವನಿಗೂ ಪ್ರಧಾನಯಾಜಕರ ಪರಿಚಯವಿತ್ತು. ಒಮ್ಮೆ
ಪ್ರಧಾನಯಾಜಕರೂ ಮತ್ತು ಫರಿಸಾಯರು ಯೇಸುವನ್ನು
ಬಂಧಿಸಲು ಕಾವಲಾಳುಗಳನ್ನು ಕಳುಹಿಸುತ್ತಾರೆ(ಯೊವಾನ್ನ 7:32). ಆದರೆ ಯೇಸುವಿನ ಬೋಧನೆಯನ್ನು
ಕೇಳಿದ ಅವರು ತಬ್ಬಿಬ್ಬಾಗಿ ಹಿಂದಿರುಗುತ್ತಾರೆ.
ಬರಿಗೈಲಿ ಹಿಂದಿರುಗಿದ ಅವರನ್ನು ಕಂಡು ಪ್ರಧಾನಯಾಜಕರು
ತರಾಟೆಗೆ ತೆಗದುಕೊಳ್ಳುತ್ತಾರೆ. ಆಗ ನಿಕೊದೇಮನು, "ಒಬ್ಬ
ವ್ಯಕ್ತಿಯ ಹೇಳಿಕೆಯನ್ನು ಕೇಳದೆ ಆತನು ಮಾಡಿರುವುದನ್ನು
ಕಂಡುಕೊಳ್ಳದೆ, ಆತನನ್ನು ದೋಷಿಯೆಂದು ನಿರ್ಧರಿಸುವುದು
ನ್ಯಾಯಸಮ್ಮತವೇ?" ಎಂದು ಯೇಸುವಿನ ಪರವಾಗಿ
ಪ್ರಧಾನಯಾಜಕರನ್ನು ಪ್ರಶ್ನಿಸುತ್ತಾನೆ. ಇದು ನಿಕೊದೇಮನಿಗೂ ಪ್ರಧಾನಯಾಜಕರಿಗೂ
ಇರುವ ಪರಿಚಯವನ್ನು ಎತ್ತಿತೋರಿಸುತ್ತದೆ. ಆದರೆ ನಿಕೊದೇಮನ ಹೆಸರನ್ನು
ತನ್ನ ಸುಸಂದೇಶದಲ್ಲಿ ಅಲ್ಲಲ್ಲಿ ಹೆಸರಿಸಿರುವ ಯೊವಾನ್ನನು ಇದ್ದಕ್ಕಿದ್ದಂತೆ ಒಂದು ಮುಖ್ಯಸಂದರ್ಭದಲ್ಲಿ, ಅದೂ
ನಿಕೊದೇಮನೇ ಆಗಿದ್ದಲ್ಲಿ, ಅವನ ಹೆಸರನ್ನು ಮರೆಮಾಚುವ
ಕಾರಣವೇ ಇರಲಿಲ್ಲ. ಹಾಗಾಗಿ ಆತ ನಿಕೊದೇಮನಾಗಿರದೆ
ನಿಸ್ಸಂದೇಹವಾಗಿ ಯೊವಾನ್ನನೇ ಆಗಿರಬೇಕು ಎಂದು ಯಾರೂ ಊಹಿಸಬಹುದು.
ಅಲ್ಲದೆ ಯೊವಾನ್ನನ ಹೆಸರು ಉಲ್ಲೇಖವಾಗಬೇಕಾದೆಡೆಯಲ್ಲೆಲ್ಲಾ ಆತನ ಹೆಸರನ್ನು
ಮರೆಮಾಚಲಾಗಿದೆ. ಇತರರ
ಸುಸಂದೇಶಗಳಲ್ಲಿ ಕಂಡು ಬರುವ ಯೊವಾನ್ನನ
ಕುರಿತ ವಿವರಗಳು, ಘಟನೆಗಳು ಈತನ ಕೃತಿಯಲ್ಲೆಲ್ಲೂ
ಕಂಡುಬರುವುದಿಲ್ಲ. ಇವು ಉದ್ದೇಶಪೂರ್ವಕವಾಗಿ ಕೈಬಿಡಲಾದ
ವಿಷಯಗಳು. ಹಾಗಾಗಿಯೇ ಈ ಕೃತಿಯ ರಚನಾಕಾರ
ಯೊವಾನ್ನನೇ ಎಂದು ನಿಸ್ಸಂದೇಹವಾಗಿ ಹೇಳಬಹುದಾಗಿದೆ.
ಅಂತೆಯೇ
ಯೇಸುವನ್ನು ಸಮಾಧಿ ಮಾಡಲಾದ ಮೂರನೆಯ
ದಿನ ಅಂದರೆ ಭಾನುವಾರ ಮುಂಜಾನೆ
ಯೇಸುವಿನ ಸಮಾಧಿಯ ಬಳಿಗೆ ಬಂದ
ಮಗ್ದಲದ ಮರಿಯಳು ಸಮಾಧಿಯ ಕಲ್ಲು
ತೆಗೆದುಹಾಕಿರುವುದನ್ನು ಕಂಡು ಓಡಿ ಬಂದು
ಪೇತ್ರ ಮತ್ತು ಇನ್ನೊಬ್ಬ ಶಿಷ್ಯ(ಯೊವಾನ್ನ)ನಿಗೆ ತಿಳಿಸಿದಾಗ
ಪೇತ್ರನನ್ನು ಹಿಂದಿಕ್ಕಿ ಸಮಾಧಿಯ ಬಳಿಗೆ ಓಡಿಬಂದವನು
ಆ ಇನ್ನೊಬ್ಬ ಶಿಷ್ಯ,
ಅದುವೇ ಯೊವಾನ್ನ(ಯೊವಾನ್ನ 20:4).
ಈ ಯೊವಾನ್ನನು ತನ್ನ
ಸಹೋದರ ಯಕೋಬನೊಂದಿಗೆ ಯೇಸುವಿನ ಶಿಷ್ಯನಾಗುವ ಮೊದಲು
ಸ್ನಾನಿಕ ಯೊವಾನ್ನನ ಶಿಷ್ಯನಾಗಿದ್ದನೆಂಬುದು ಗಮನಾರ್ಹ. ಮೂಲತಃ ಈ ಮೂವರೂ
ಬೆಸ್ತರು. ಗಲಿಲೇಯ(ತಿಬೇರಿಯ) ಸಮುದ್ರದಲ್ಲಿ
ಮೀನು ಹಿಡಿಯುವುದು ಅವರ ಕೈಂಕರ್ಯ. ಯೇಸು
ಪುನರುತ್ಥಾನರಾದ ಬಳಿಕ ಏಳು ಮಂದಿ
ಅಪೋಸ್ತಲರು ಮೀನನ್ನು ಹಿಡಿಯಲು ಹೊರಟು
ಮೀನೊಂದೂ ಸಿಗದೆ ಬಸವಳಿದಿದ್ದಾಗ ಮುಂಜಾನೆ
ತೀರದ ಬಳಿಗೆ ಬಂದ ಯೇಸು
ದೋಣಿಯ ಬಲಗಡೆಗೆ ಬಲೆಯನ್ನು ಹಾಕಲು
ಸೂಚಿಸುತ್ತಾರೆ. ಆಗ ಹೇರಳವಾಗಿ ಮೀನು
ದೊರೆಯುತ್ತದೆ. ಆ ಸಂದರ್ಭದಲ್ಲಿ ಯೇಸುವನ್ನು
ಗುರುತಿಸಿ ಪೇತ್ರನಿಗೆ ಹೇಳುವವನು ಹೆಸರಿಲ್ಲದ ಆ ಇನ್ನೊಬ್ಬ ಶಿಷ್ಯ
ಅಂದರೆ ಯೊವಾನ್ನ(ಯೊವಾನ್ನ 21:7).
ಇಲ್ಲವನು 'ಆಪ್ತಶಿಷ್ಯ'ನಾಗಿದ್ದಾನೆ ಅಷ್ಟೆ. ಯೇಸುವಿನ ಸ್ವರ್ಗಾರೋಹಣದ
ನಂತರ ಪವಿತ್ರಾತ್ಮ,ಭರಿತರಾದ ಪೇತ್ರ ಮತ್ತು
ಯೊವಾನ್ನರು ಮಹಾದೇವಾಲಯದ ಬಳಿ ಹುಟ್ಟುಕುಂಟನೊಬ್ಬನಿಗೆ ನಡೆದಾಡುವ
ಶಕ್ತಿಯನ್ನು ಯೇಸುವಿನ ಹೆಸರಿನಲ್ಲಿ ಕರುಣಿಸುತ್ತಾರೆ.
ಅದೇ ಕಾರಣಕ್ಕೆ ಅವರು ನ್ಯಾಯಸಭೆಯ ಮುಂದೆ
ನಿಲ್ಲಬೇಕಾದ ಪರಿಸ್ಥಿತಿ ಎದುರಾದರೂ ಎದೆಗುಂದದೆ ಧೈರ್ಯದಿಂದ ಎದುರಿಸುತ್ತಾರೆ. ಶುಭಸಂದೇಶಗಳಲ್ಲಿ ಜೆಬೆದೇಯನ ಮಕ್ಕಳನ್ನು ಹೆಸರಿಸುವಾಗ ಮೊದಲು ಯಕೋಬನ ಹೆಸರು
ತದನಂತರ ಯೊವಾನ್ನನ ಹೆಸರೂ ಬರುತ್ತದೆ. ಪ್ರಾಯಶಃ
ಅವರೀರ್ವರಲ್ಲಿ ಯಕೋಬ ಹಿರಿಯವನಾಗಿರಬೇಕು; ಆ
ಕಾರಣಕ್ಕೆ ಮೊದಲು ಅವನ ಹೆಸರನ್ನು
ಸೂಚಿಸಲಾಗಿದೆ ಎಂದೆನಿಸುತ್ತದೆ. ಆದರೆ ಹೆರೋದ ಅಂತಿಪಾನ
ಹಿಂಸೆಗೆ ಯಕೋಬ ಬಲಿಯಾದಾಗ(ಅಪೋಸ್ತಲ
12:2) ಯೊವಾನ್ನ ಏಕಾಂಗಿಯಾಗುತ್ತಾನೆ.
ಯೊವಾನ್ನನು
ತನ್ನ 'ಸುಸಂದೇಶ'ವೆಂಬ ಕೃತಿಯನ್ನು
ರಚಿಸಿದ್ದು ತನ್ನ ಮುಪ್ಪಿನಲ್ಲಿ. ಆ
ವೇಳೆಗಾಗಲೇ ಮತ್ತಾಯ, ಮಾರ್ಕ ಮತ್ತು
ಲೂಕರು ಸುಸಂದೇಶಗಳನ್ನು ಬರೆದು ಮುಗಿಸಿ ಮೂವತ್ತು
ವಷ್ಘಳು ಸಂದಿದ್ದವು. ಇಲ್ಲಿ ಗಮನಿಸಬೇಕಾದ ಒಂದು
ಅಂಶವೆಂದರೆ, ಯೊವಾನ್ನನು ತನ್ನ ಸುಸಂದೇಶ' ಕೃತಿಗೂ
ಮುಂಚೆಯೇ 'ಪ್ರಕಟಣೆ' ಎಂಬ ಕೃತಿಯನ್ನು ಬರೆದಿದ್ದನೆಂಬ
ವಿವರ ದೊರೆಯುತ್ತದೆ. ಈ ಕೃತಿಯನ್ನು ರಚಿಸುವ
ಸಮಯ(ಡೊಮಿಶಿಯನ್ ಚಕ್ರವರ್ತಿಯ ಆಡಳಿತದ ಅವಧಿ)ದಲ್ಲಿ
ಯೊವಾನ್ನನು ಗಡಿಪಾರಾಗಿ ಪಾತ್ಮೋಸ್ ಎಂಬ ದ್ವೀಪದಲ್ಲಿ ಬಂಧನದಲ್ಲಿದ್ದ.
ಅಲ್ಲಿ ಕಂಡ 'ದಿವ್ಯದರ್ಶನ'ಗಳಿಗೆ
ಅವನು ಕೃತಿಯರೂಪವನ್ನು ನೀಡಿದ್ದಾನೆ. ಈ ಕೃತಿಯು ಮುಕ್ತಾಯ
ಘಟ್ಟ(ಕ್ರಿ.ಶ. 96)ವನ್ನು ತಲುಪುತಿದ್ದಂತೆಯೇ ಕ್ರೈಸ್ತರಿಗೆ
ಅಮಾನುಷವಾಗಿ ಕಿರುಕುಳವನ್ನು ನೀಡುತ್ತಿದ್ದ ಚಕ್ರವರ್ತಿ ಡೊಮಿಶಿಯನ್ನ ಹತ್ಯೆಯಾಗುತ್ತದೆ. ಅವನ
ನಂತರ ಚಕ್ರವರ್ತಿಯಾದ ಸಹನಶೀಲನಾದ ನೆರ್ವೋನ ಅವಧಿಯಲ್ಲಿ ಬಿಡುಗಡೆಯ
ಭಾಗ್ಯ ಕಾಣುವ ಯೊವಾನ್ನ ಎಫೆಸವನ್ನು
ತಲುಪುತ್ತಾನೆ. ಅಲ್ಲಿಯೇ ತನ್ನ ಜೀವಿತಾವಧಿಯ
ಕೊನೆಯ ದಿನಗಳನ್ನು ದೂಡಿದ ಯೊವಾನ್ನ 'ಸುಸಂದೇಶ'ವನ್ನು (ಕ್ರಿ.ಶ.
98ರಲ್ಲಿ) ರಚಿಸುತ್ತಾನೆ. 'ಸುಸಂದೇಶ'ವನ್ನೂ, ಅದರೊಂದಿಗೆ
ಎರಡು ಚುಟುಕಾದ ಹಾಗೂ ಒಂದು
ದೀರ್ಘವಾದ 'ಪತ್ರ'ವನ್ನೂ ಬರೆದು
ಮುಗಿಸಿದ ಬಳಿಕ ಯೊವಾನ್ನನು ನಿಶ್ಚಿಂತೆಯಿಂದ
ಕಾಲವಾಗುತ್ತಾನೆ. ಯೊವಾನ್ನನು ಮರಣಿಸಿದ್ದು ಕ್ರಿ.ಶ. 100ರಲ್ಲಿ;
ಅದು ಚಕ್ರವರ್ತಿ ಟ್ರಾಜಾನನ ಆಳ್ವಿಕೆಯ ಮೂರನೆಯ ವರ್ಷ. ಬಹುತೇಕ
ಎಲ್ಲಾ ಪ್ರೇಷಿತರು ರಕ್ತಸಾಕ್ಷಿಗಳಾದರೆ, ತನ್ನ ಜೀವಿತಾವಧಿಯ ಕೊನೆಯ
ಘಳಿಗೆಯವರೆಗೂ ಉಳಿದು ಮುಪ್ಪಿನಲ್ಲಿ ಮರಣಹೊಂದಿದ
ಏಕೈಕ ಪ್ರೇಷಿತ ಯೊವಾನ್ನ. ಎಫೆಸದಲ್ಲಿರುವ
ಇವರ ಸಮಾಧಿಯ ಮೇಲೆ ಈಗ
ಇಸ್ಲಾಂ ಧರ್ಮದವರ ಮಸೀದಿ ಎದ್ದು
ನಿಂತಿದೆ.
ಡಿಸೆಂಬರ್,
27ರಂದು ಪ್ರೇಷಿತ ಹಾಗೂ ಸುಸಂದೇಶಕರ್ತ
ಸಂತ ಯೊವಾನ್ನನ ಹಬ್ಬ. ಅಂದೇ ಅವನ
ಸಹೋದರ ಸಂತ ಯಕೋಬನ ಹಬ್ಬವೂ
ಸಹ. ಸುಸಂದೇಶಕರ್ತ ಯೊವಾನ್ನನ ಚಿಹ್ನೆ, 'ಗರುಡ'. ಈತ ಸ್ನೇಹ,
ಪ್ರೀತಿ, ನಿಷ್ಠೆಯ ಪಾಲಕ ಸಂತ.
ಅಧ್ಯಾಯಗಳು
ಕಾಮೆಂಟ್‌ಗಳಿಲ್ಲ:
ಹೊಸ ಕಾಮೆಂಟ್ಗಳನ್ನು ಅನುಮತಿಸಲಾಗುವುದಿಲ್ಲ.